ಪರ್ಪಲ್ ರಾಕ್ ಎಂಟರ್ಟೈನ್ಮೆಂಟ್ ಹಾಗೂ ವಿಂಟರ್ ಬ್ರಿಡ್ಸ್ ಸ್ಟುಡಿಯೋಸ್ ಜೊತೆಯಾಗಿ ನಿರ್ಮಿಸುತ್ತಿರುವ 'ಡಿಯರ್ ಸತ್ಯ' ಟೀಸರ್ ಆಗಸ್ಟ್ 15 ಕ್ಕೆ ಬಿಡುಗಡೆಯಾಗಲಿದೆ. ಆರ್ಯನ್ ಸಂತೋಷ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'ಡಿಯರ್ ಸತ್ಯ' ಆ್ಯಕ್ಷನ್, ರಿವೇಂಜ್, ಥ್ರಿಲ್ಲರ್ ಚಿತ್ರ. ಸದಾ ಗಿಜಿಗುಡುವ, ಗದ್ದಲದ ಊರು ಬೆಂಗಳೂರು. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಒತ್ತಡಗಳು, ಜಂಜಾಟಗಳಿರುತ್ತವೆ. ಇದೆಲ್ಲದರ ನಡುವೆ ಸಾಮಾನ್ಯನೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ, ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವ ಕಥಾ ಹಂದರ 'ಡಿಯರ್ ಸತ್ಯ' ಚಿತ್ರದಲ್ಲಿದೆ. ನಾಯಕನ ವಿರುದ್ಧ ಪಿತೂರಿ ನಡೆಸುವ ಘಟನೆಗಳೊಂದಿಗೆ ತಿರುವು ಪಡೆಯುವ ಅಂಶಗಳನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದೆ.
ಆರ್ಯನ್ ಸಂತೋಷ್ ಅಭಿನಯದ 'ಡಿಯರ್ ಸತ್ಯ' 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು', 'ಹಳ್ಳಿ ಹೈದ ಪ್ಯಾಟೆಗ್ ಬಂದ' ರಿಯಾಲಿಟಿ ಶೋ ನಿರೂಪಕ, ಮಾಜಿ ಬಿಗ್ಬಾಸ್ ಸ್ಪರ್ಧಿ ಆರ್ಯನ್ ಸಂತೋಷ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ನೂರು ಜನ್ಮಕು' ಚಿತ್ರದ ಮೂಲಕ ಸಂತೋಷ್ ನಾಯಕನಾಗಿ ಚಿತ್ರರಂಗಕ್ಕೆ ಬಂದಿದ್ದರು. ಇದೀಗ ಸತ್ಯನಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇವರ ಜೊತೆಗೆ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನೈಜ ಘಟನೆಗಳ ಪ್ರೇರಣೆಯಿಂದ ತಯಾರಾಗಿರುವ 'ಡಿಯರ್ ಸತ್ಯ' ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಚಂದ್ರಕರ್ ಹಾಗೂ ಇನ್ನಿತರರು ನಟಿಸಿದ್ದಾರೆ.
'ಜಿಗರ್ ಥಂಡ' ಖ್ಯಾತಿಯ ಶಿವಗಣೇಶ್ 'ಡಿಯರ್ ಸತ್ಯ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಆ ದೃಶ್ಯ, ತ್ರಾಟಕ ಮುಂತಾದ ಸಿನಿಮಾಗಳ ಮೂಲಕ ಹೆಸರು ಮಾಡಿರುವ ವಿನೋದ್ ಭಾರತಿ 'ಡಿಯರ್ ಸತ್ಯ' ಚಿತ್ರದ ಛಾಯಾಗ್ರಹರಾಗಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅವರ ಮನಸೆಳೆಯುವ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ರಾಜ್ಯಪ್ರಶಸ್ತಿ ವಿಜೇತ ಸುರೇಶ್ ಆರ್ಮುಗಂ ಸಂಕಲನ, ಭಜರಂಗಿ ಮೋಹನ್, ಕಲೈ ಮತ್ತು ಗೀತಾ ನೃತ್ಯ ಸಂಯೋಜನೆ, ಕುಂಗ್ಫೂ ಚಂದ್ರು ಸಾಹಸ ನಿರ್ದೇಶನ, ಭಾರ್ಗವಿ ವಿಖ್ಯಾತಿ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.
ಕಳೆದ ವರ್ಷ ಡಿಸೆಂಬರ್ 27 ರಂದು 'ಡಿಯರ್ ಸತ್ಯ' ಚಿತ್ರಕ್ಕಾಗಿ ಮುಹೂರ್ತ ನಡೆಸಲಾಗಿತ್ತು. ಅದೇ ದಿನ ಚಿತ್ರೀಕರಣ ಕೂಡಾ ಆರಂಭವಾಗಿ, 2020 ರ ಮಾರ್ಚ್ 4ರಂದು ಶೂಟಿಂಗ್ ಪೂರ್ಣಗೊಂಡಿತ್ತು. ಕೊರೊನಾ ಸಮಸ್ಯೆ ಕಾರಣದಿಂದ ಚಿತ್ರ ಬಿಡುಗಡೆ ತಡವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ಡಿಯರ್ ಸತ್ಯ' ಚಿತ್ರದ ಟೀಸರ್ ಆಗಸ್ಟ್15ರಂದು ಪರ್ಪಲ್ ರಾಕ್ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಲಿದೆ.