ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಮ್ಮನ್ನು ಅಗಲಿ ಒಂದು ವಾರ ಕಳೆದಿದೆ. ಬಹುತೇಕ ಎಲ್ಲಾ ನಟರಿಗೆ ಧ್ವನಿಯಾಗಿದ್ದ, ಎಲ್ಲಾ ಸಂಗೀತ ನಿರ್ದೇಶಕರ ಹಾಡುಗಳನ್ನೂ ಹಾಡಿದ್ದ ಎಸ್ಪಿಬಿ ಅವರ ಬಗ್ಗೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶನ ಎ.ಆರ್. ರೆಹಮಾನ್ ಮನದಾಳದ ಮಾತುಗಳನ್ನು ಆಡಿದ್ದಾರೆ.
ಎಸ್ಪಿಬಿ ಜೊತೆ ಕಾರ್ಯಕ್ರಮ ಮಾಡುವ ಕನಸು ಭಗ್ನ..ಬೇಸರ ವ್ಯಕ್ತಪಡಿಸಿದ ಎ.ಆರ್. ರೆಹಮಾನ್ - SPB reminds AR Rahman
ಎಸ್ಪಿಬಿ ಅವರೊಂದಿಗೆ ಸಂಗೀತ ಕಾರ್ಯಕ್ರಮ ಮಾಡಬೇಕೆಂದುಕೊಂಡಿದ್ದ ಎ.ಆರ್. ರೆಹಮಾನ್ ಆಸೆ ಕೊನೆಗೂ ಈಡೇರಲಿಲ್ಲ. ಈ ಬಗ್ಗೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಮಸ್ಯೆ ಕಡಿಮೆಯಾದ ನಂತರ 2021 ರಲ್ಲಿ ಈ ಕಾರ್ಯಕ್ರಮ ಮಾಡಲು ಇಬ್ಬರೂ ಮಾತನಾಡಿದ್ದೆವು ಎಂದು ರೆಹಮಾನ್ ಹೇಳಿದ್ದಾರೆ.
ಎಸ್ಪಿಬಿ ಅವರನ್ನು ಕಳೆದುಕೊಂಡಿದ್ದು ನಿಜಕ್ಕೂ ದೊಡ್ಡ ಆಸ್ತಿಯೊಂದನ್ನು ಕಳೆದುಕೊಂಡಂತಾಗಿದೆ. ಎಸ್ಪಿಬಿ ಅವರೊಂದಿಗೆ ಒಂದು ಸಂಗೀತ ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಕೊರೊನಾ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ. ಈ ಸಮಸ್ಯೆ ಎಲ್ಲಾ ಸಹಜ ಸ್ಥಿತಿಗೆ ಬಂದ ನಂತರ ಇಬ್ಬರೂ ಸೇರಿ ಒಂದು ಕಾರ್ಯಕ್ರಮ ಮಾಡೋಣ ಎಂದು ಮಾತನಾಡಿದ್ದೆವು. ಆದರೆ ಅವರೊಂದಿಗೆ ಕಾರ್ಯಕ್ರಮ ಮಾಡುವ ಅದೃಷ್ಟ ನನಗೆ ಮತ್ತೆ ಒದಗಿ ಬರಲಿಲ್ಲ ಎಂದು ಎ.ಆರ್. ರೆಹಮಾನ್ ಬೇಸರ ವ್ಯಕ್ತಪಡಿಸಿದ್ದಾರೆ.
1997 ರಲ್ಲಿ ಬಿಡುಗಡೆಯಾದ ಅರವಿಂದ್ ಸ್ವಾಮಿ, ಕಾಜೊಲ್ ನಟನೆಯ 'ಮಿಂಸಾರ ಕನವು' ಚಿತ್ರದ ತಂಗ ತಾಮರೈ ಮಗಲೇ... ಎಂಬ ಹಾಡಿಗೆ ಎ.ಆರ್. ರೆಹಮಾನ್ ಸಂಗೀತ ನಿರ್ದೇಶಿಸಿದ್ದ ಹಾಡನ್ನು ಎಸ್ಪಿಬಿ ಹಾಗೂ ಮಾಲ್ಗುಡಿ ಶುಭ ಹಾಡಿದ್ದರು. ಈ ಹಾಡನ್ನು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಎಸ್ಪಿಬಿ ಹಾಡಿದ್ದರು. ಆ ಸಮಯದಲ್ಲೇ ಮತ್ತೆ ಎಸ್ಪಿಬಿ ಅವರೊಂದಿಗೆ ಒಂದು ಕಾರ್ಯಕ್ರಮ ಮಾಡಬೇಕೆಂದು ಎ.ಆರ್. ರೆಹಮಾನ್ ಪ್ಲ್ಯಾನ್ ಮಾಡಿದ್ದರಂತೆ. ಆದರೆ ಇಂತಹ ಸುವರ್ಣ ಅವಕಾಶ ತಪ್ಪಿ ಹೋಯ್ತಲ್ಲಾ ಎಂದು ರೆಹಮಾನ್ ಬೇಸರ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಕೂಡಾ ಈ ಸಂಗೀತ ದಿಗ್ಗಜರ ಕಾರ್ಯಕ್ರಮವನ್ನು ಕೇಳುವ ಅವಕಾಶ ದೊರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.