ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನದ ನೋವನ್ನು ಅಭಿಮಾನಿಗಳಲ್ಲದೆ, ಇಡೀ ರಾಜ್ ಕುಟುಂಬಕ್ಕೇ ಮರೆಯೋದಕ್ಕೆ ಆಗ್ತಾ ಇಲ್ಲ. ಈ ಮಧ್ಯೆ ಪವರ್ ಸ್ಟಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸ್ತಬ್ಧ ಸಿನಿಮಾದಲ್ಲಿ ನಟಿಸುತ್ತಿರುವ ನಟ ರಾಘವೇಂದ್ರ ರಾಜ್ ಕುಮಾರ್, ಜೇಮ್ಸ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವ್ರು, ರಾಜ್ ಕುಮಾರ್ ಜೊತೆ ಮಕ್ಕಳಾದ ಶಿವಣ್ಣ, ರಾಘಣ್ಣ ಹಾಗು ಅಪ್ಪು ಹಾಕಿ ಒಂದು ಸಿನಿಮಾ ಮಾಡುವ ಕನಸು ಕಂಡಿದ್ರಂತೆ.
ಒಮ್ಮೆ ಪಾರ್ವತಮ್ಮ ರಾಜ್ ಕುಮಾರ್ ಕೆಜಿ ರಸ್ತೆಯಲ್ಲಿ ಕಾರಲ್ಲಿ ಹೋಗಬೇಕಾದ್ರೆ, ಗಂಡ ಹಾಗು ಮಕ್ಕಳಾದ ಶಿವಣ್ಣ, ರಾಘಣ್ಣ ಮತ್ತು ಅಪ್ಪು ಕಟೌಟ್ಗಳನ್ನ ನೋಡಿ, ರಾಜ್‍ಕುಮಾರ್ ಜೊತೆ ಮಕ್ಕಳ ಸಿನಿಮಾ ಮಾಡುವ ಆಸೆಯನ್ನ ವ್ಯಕ್ತಪಡಿಸಿದ್ರಂತೆ. ಆಗ ಡಾ. ರಾಜ್ ಕುಮಾರ್ ಅವರು ದೇವರು ಎಲ್ಲಾ ಕೊಡ್ತಾನೆ ಅಂತ ಹೇಳೋಕೆ ಆಗಲ್ಲ ಅಂದಿದ್ರಂತೆ. ಕೊನೆಗೂ ಅದೇ ರೀತಿ ಅಯ್ತು. ಅಪ್ಪಾಜಿ ಜೊತೆ ನಾವೆಲ್ಲ ನಟಿಸೋಕೆ ಅಗಲಿಲ್ಲ. ಅಮ್ಮ ನೀವು ಮೂರು ಜನ ಒಟ್ಟಿಗೆ ನಟಿಸಿ ಅಂತ ಸಾಕಷ್ಟು ಸಲ ಹೇಳಿದ್ರು. ಆದರೆ ಆ ಆಸೆ ಸಹ ಈಡೇರಲಿಲ್ಲ. ಈಗ ಅಪ್ಪಾಜಿ ಇಲ್ಲದೆ, ಜೇಮ್ಸ್ ಚಿತ್ರದಲ್ಲಿ ನಾವು ಒಟ್ಟಿಗೆ ನಟಿಸಿದ್ವಿ. ಜೇಮ್ಸ್ ಚಿತ್ರದಲ್ಲಿ ನಾನು, ಶಿವಣ್ಣ ನಟಿಸದೇ ಹೋಗಿದ್ರೆ ಇನ್ಯಾವತ್ತು ಈ ಅವಕಾಶ ಸಿಗ್ತಿರಲಿಲ್ಲ. ಅದಕ್ಕೆ ಜೇಮ್ಸ್ ಚಿತ್ರದಲ್ಲಿ ತುಂಬಾ ನೋವಿನಲ್ಲೇ ನಟಿಸಿದ್ದೀವಿ. ಜೇಮ್ಸ್ ಚಿತ್ರದಲ್ಲಿ ನಾವು ನಟಿಸಿರೋದು ಪ್ರಚಾರದ ಗಿಮಿಕ್ ಅಲ್ಲ. ಅಲ್ಲದೆ ಅಪ್ಪು ಚಿತ್ರಕ್ಕೆ ಪ್ರಚಾರ ಮಾಡುವವರು ಯಾರೂ ಇಲ್ಲ. ಜೇಮ್ಸ್ ಚಿತ್ರದಲ್ಲಿ ನಾವು ನಟಿಸಿದ ಈ ಪಾತ್ರಗಳು ಮೊದಲೇ ಫಿಕ್ಸ್ ಆಗಿದ್ವು ಎಂದು ಸ್ಪಷ್ಟಪಡಿಸಿದ್ದಾರೆ.