ಭಾರತ ಸರ್ಕಾರ ನೀಡಲಾಗುವ ಅತ್ಯಂತ ಗೌರವಾನ್ವಿತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಕರೆ ನೀಡಿದೆ. ಅಂತೆಯೇ ಈ ಸಾಲಿನಲ್ಲಿ ಕನ್ನಡದ ಎವರ್ ಗ್ರೀನ್ ನಟ ಅನಂತ್ ನಾಗ್ ಅವರಿಗೆ ಪದ್ಮ ಪುರಸ್ಕಾರ ಸಿಗಬೇಕು ಎಂಬ ಕೂಗು ಕೇಳಿಬರುತ್ತಿದೆ.
ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬ ಅಭಿಯಾನಕ್ಕೆ ನಟ ಪುನೀತ್ ರಾಜ್‍ಕುಮಾರ್, ರಕ್ಷಿತ್ ಶೆಟ್ಟಿ, ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿದ್ದಾರೆ. ಈಗ ನಟ ಯಶ್ ಕೂಡ ಅಭಿಯಾನಕ್ಕೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದಾರೆ. (ಅನಂತ್ನಾಗ್ಗೆ 'ಪದ್ಮ ಪ್ರಶಸ್ತಿ' : ಅಭಿಯಾನಕ್ಕೆ ಕೈಜೋಡಿಸಿದ ಪವರ್ ಸ್ಟಾರ್)
ಅನಂತನಾಗ್ ಅವರು ಕೇವಲ ನಟರಲ್ಲ, ಅವರು ಭಾರತೀಯ ಸಿನಿಮಾದ ಅಭಿಜ್ಞ ನಟ ಎಂದು ಯಶ್ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ ಅನಂತ್ ನಾಗ್ ಜೊತೆ ಹಲವು ಸಿನಿಮಾಗಳಲ್ಲಿ ಸ್ಕ್ರೀನ್ ಹಂಚಿಕೊಂಡಿರುವ ಯಶ್, ಅವರ ನಟನೆ ಬಗ್ಗೆ ಕೊಂಡಾಡಿದ್ದಾರೆ.
ನಟನೆ ಎನ್ನುವುದು ವರ್ತನೆ ಹೀಗೆಂದು ಒಮ್ಮೆ ಅನಂತನಾಗ್ ಅವರು ನನ್ನಲ್ಲಿ ಹೇಳಿದ್ದರು. ಈ ಮಾತು ನನ್ನಲ್ಲಿ ಇನ್ನೂ ಉಳಿದಿದೆ. ಬೆಳೆಯುತ್ತಾ, ಅವರ ಹಾಸ್ಯ ಪ್ರಧಾನ ಚಿತ್ರಗಳನ್ನು ನೋಡಿ ನಕ್ಕವನು ನಾನು. ಅವರು ಅತ್ತಾಗ ನನ್ನ ಕಣ್ಣೂ ಒದ್ದೆಯಾಗಿತ್ತು. ಈ ಮಾಂತ್ರಿಕನ ಜೊತೆಗೆ ತೆರೆ ಹಂಚಿಕೊಳ್ಳಬೇಕು ಎನ್ನುವ ಆಸೆ ನನಗೆ ಎಂದೆಂದಿಗೂ ಇರಲಿದೆ. ಅವರ ಸಿನಿಮಾಗಳು ಇಂದಿಗೂ ಪ್ರಸ್ತುತ. ಕಿರುತೆರೆಯಿಂದ ಹಿಡಿದು ನನ್ನ ಸಿನಿಮಾ ಪಯಣದ ಆರಂಭದಿಂದಲೂ ಈ ಅದ್ಭುತ ನಟನ ಜೊತೆ ನಟಿಸುವ ಭಾಗ್ಯ ನನಗೆ ದೊರಕಿದೆ. ಭಾರತೀಯ ಸಿನಿಮಾದ ಅಭಿಜ್ಞ. ಹೀಗಾಗಿ ಪದ್ಮ ಪ್ರಶಸ್ತಿಗೆ ಇವರು ಅತ್ಯುತ್ತಮರು ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದಿಕೊಂಡಿದ್ದಾರೆ.
ಇನ್ನು ಭಾರತೀಯ ಚಿತ್ರರಂಗದಲ್ಲಿ 4 ದಶಕಗಳನ್ನ ಪೂರೈಸಿದ ಅನಂತ್ ನಾಗ್, ಬರೋಬ್ಬರಿ 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಯ ಸಿನಿಮಾಗಳಲ್ಲಿ ಅವರು ಅಭಿನಯಿಸಿರೋದು ವಿಶೇಷ.