ಕಿಚ್ಚ ಸುದೀಪ್, ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಕೂಡಾ ಹೆಸರು ಮಾಡಿರುವ ನಟ ಎಂಬುದು ತಿಳಿದ ವಿಚಾರ. ನಟನಾಗಿ, ನಿರ್ದೇಶಕ, ನಿರ್ಮಾಪಕನಾಗಿ ಮಾತ್ರವಲ್ಲ ನಿರೂಪಕನಾಗಿ ಕೂಡಾ ಗುರುತಿಸಿಕೊಂಡಿರುವ ಸುದೀಪ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ.
ಭಾನುವಾರವಷ್ಟೇ ಪ್ರಪಂಚದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾದಲ್ಲಿ ಕನ್ನಡ ಬಾವುಟ ಹಾಗೂ ಸುದೀಪ್ ಕಟೌಟ್ ರಾರಾಜಿಸಿತ್ತು. ಈ ವಿಡಿಯೋ ಬಹುತೇಕ ಎಲ್ಲರ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಗೂ ವಾಟ್ಸಾಪ್ ಸ್ಟೇಟಸ್ನಲ್ಲಿ ಹರಿದಾಡುತ್ತಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಬಿಟ್ಟರೆ ಈ ಗೌರವ ದೊರೆತಿದ್ದು ಕನ್ನಡಿಗ ಸುದೀಪ್ಗೆ. ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಚಿತ್ರದ ಟೀಸರ್ ಹಾಗೂ ಟೈಟಲ್ ಲೋಗೋ ನಿನ್ನೆ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಪ್ರಸಾರವಾಗಿದನ್ನು ಕಂಡ ಕನ್ನಡಿಗರು ಸುದೀಪ್ ಬಗ್ಗೆ ಬಹಳ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಪ್ರಪಂಚದ ಅತ್ಯಂತ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಬುರ್ಜ್ ಖಲೀಫಾದಲ್ಲಿ ಈ ರೀತಿಯ ಲೇಸರ್ ಶೋ ಗೌರವ ದೊರೆಯುತ್ತದೆ. ಅಂತದ್ದರಲ್ಲಿ ಸುದೀಪ್ಗೆ ಈ ಗೌರವ ದೊರೆತಿದೆ ಎಂದರೆ ನಿಜಕ್ಕೂ ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಅಭಿಮಾನಿಗಳು ಕೂಡಾ ಈ ಖುಷಿಯನ್ನು ಇಂದಿಗೂ ಸಂಭ್ರಮಿಸುತ್ತಲೇ ಇದ್ದಾರೆ.