ತ್ರಿಪೆಗ್, ಪಾರ್ಟಿ ಪ್ರೀಕ್, ಲಕ ಲಕ ಲ್ಯಾಂಬೋರ್ಗಿನಿ ಸೇರಿದಂತೆ ಹಲವು ಆಲ್ಬಂ ಹಾಡುಗಳ ಮೂಲಕ ತನ್ನದೇ ಐಡೆಂಟಿಟಿಯನ್ನ ಹೊಂದಿರುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ. ಸದ್ಯ ಆಲ್ಬಂ ಸಾಂಗ್ ಮತ್ತು ಸಿನಿಮಾಗಳಿಗೆ ಮ್ಯೂಜಿಕ್ ಮಾಡ್ತಾ ಇರೋ ಚಂದನ್ ಶೆಟ್ಟಿ, ಈಗ ಒಂದು ಕೈ ನೋಡೆ ಬಿಡೋಣ ಅಂತಾ ಹೀರೋ ಆಗೋದಿಕ್ಕೆ ಹೊರಟಿದ್ದಾರೆ.
ಈ ಚಿತ್ರಕ್ಕೆ 'ಎಲ್ರ ಕಾಲೆಳೆಯುತ್ತೆ ಕಾಲ' ಎಂಬ ಕ್ಯಾಚೀ ಟೈಟಲ್ ಇಟ್ಟಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಕರ್ನಾಟಕದಲ್ಲಿ ಕನ್ನಡತನ ಮರೆಯಾಗುತ್ತಿದೆ. ನಾವು ಹೇಗೆ ಬೇರೆಭಾಷೆಗಳ ಚಿತ್ರಗಳನ್ನು ಸಬ್ ಟೈಟಲ್ ಮೂಲಕ ನೋಡುತ್ತೀವಲ್ಲಾ, ಹಾಗೆ ಬೇರೆ ಭಾಷೆಗಳಲ್ಲೂ ನಮ್ಮ ಕನ್ನಡ ಚಿತ್ರಗಳು ಬಿಡುಗಡೆಯಾಗಲಿ. ಅವರು ನಮ್ಮ ಹಾಗೆ ನೋಡಲಿ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಅರ್ಜುನ್ ಅವಧೂತರು ಆಶೀರ್ವದಿಸಿದರು.
ತಮ್ಮ ವಿಭಿನ್ನ ಹಾಸ್ಯ ಪಾತ್ರಗಳ ಮೂಲಕ ಹೆಸರಾಗಿರುವ, ಸುಜಯ್ ಶಾಸ್ತ್ರಿ ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಸುಜಯ್ ಶಾಸ್ತ್ರಿ ಹೇಳುವ ಹಾಗೇ ನಾನು ಹಾಗೂ ರಾಜ್ ಗುರು ಸೇರಿ ಕಥೆ ಮಾಡಿಕೊಂಡೆವು. ನಿರ್ಮಾಪಕ ಗೋವಿಂದರಾಜು ಅವರ ಮುಂದೆ ಕಥೆ ಹೇಳಿದೆವು. ನಮ್ಮ ಕಥೆಯನ್ನು ಮೆಚ್ಚಿದ ಅವರು ಕೊರೊನಾ ಕಡಿಮೆಯಾದ ಮೇಲೆ ಚಿತ್ರ ಆರಂಭಿಸೋಣ ಎಂದಿದ್ದರು. ಈಗ ಚಿತ್ರ ಆರಂಭಾಗಿದೆ. 1980 ರಿಂದ 90ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಕಥೆಯ ಬಗ್ಗೆ ಜಾಸ್ತಿ ಹೇಳುವುದಿಲ್ಲ. ಈ ಚಿತ್ರದ ನಯಕನಾಗಿ ಚಂದನ್ ಶೆಟ್ಟಿ, ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸುತ್ತಿದ್ದಾರೆ. ತಾರಾ, ಮಂಡ್ಯ ರಮೇಶ್, ಮಂಜು ಪಾವಗಡ, ನಾಗರಾಜ್ ಮೂರ್ತಿ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ನಾನು ಕೂಡ ಅಭಿನಯಿಸುತ್ತಿದ್ದೀನಿ ಎಂದು ನಿರ್ದೇಶಕ ಸುಜಯ್ ಶಾಸ್ತ್ರಿ ಹೇಳಿದ್ದಾರೆ.