ಸುದೀಪ್ ಅಭಿನಯದ `ಫ್ಯಾಂಟಮ್' ಚಿತ್ರಕ್ಕೆ ಇಂದು ಅಲಂಕಾರ್ ಪಾಂಡಿಯನ್ ಸಹನಿರ್ಮಾಪಕರಾಗಿ ಸೇರಿಕೊಂಡಿದ್ದು ಗೊತ್ತೇ ಇದೆ. ಖುದ್ದು ಸುದೀಪ್ ಅವರು ಮುಂದೆ ನಿಂತು ಅಲಂಕಾರ್ ಪಾಂಡಿಯನ್ ಅವರನ್ನು ಚಿತ್ರತಂಡಕ್ಕೆ ಸೇರಿಸಿಕೊಂಡಿದ್ದಾರೆ. ಇದುವರೆಗೂ ನಿರ್ಮಾಪಕ ಮಂಜುನಾಥ್ ಗೌಡ ಮಾತ್ರ 'ಫ್ಯಾಂಟಮ್' ಚಿತ್ರವನ್ನು ನಿರ್ಮಿಸುತ್ತಿದ್ದರು. ಇದೀಗ ಅಲಂಕಾರ್ ಪಾಂಡಿಯನ್ ಸಹ ಸೇರಿಕೊಂಡಿದ್ದಾರೆ.
ಎಲ್ಲಾ ಸರಿ, ಅರ್ಧ ಚಿತ್ರದ ಚಿತ್ರೀಕರಣ ಮುಗಿದಿರುವ ಸಂದರ್ಭದಲ್ಲಿ ಅಲಂಕಾರ್ ಎಂಟ್ರಿ ಕೊಟ್ಟಿದ್ದು ಯಾಕೆ? ಎಂಬ ಪ್ರಶ್ನೆ ಬರುವುದು ಸಹಜ. ಮೂಲಗಳ ಪ್ರಕಾರ, `ಫ್ಯಾಂಟಮ್' ಚಿತ್ರವು ದಿನದಿಂದ ದಿನಕ್ಕೆ ಬಿಳಿಆನೆ ಆಗುತ್ತಿದ್ದು, ಅದನ್ನು ಸಾಕುವುದಕ್ಕೆ ನಿರ್ಮಾಪಕ ಮಂಜುನಾಥ್ ಗೌಡ ಅವರಿಗೆ ಕಷ್ಟವಾಗುತ್ತಿದೆಯಂತೆ. `ಫ್ಯಾಂಟಮ್', ಸುದೀಪ್ ಅಭಿನಯದ ಚಿತ್ರಗಳಲ್ಲೇ ದುಬಾರಿ ಚಿತ್ರವಾಗುತ್ತಿದ್ದು, ದಿನದಿಂದ ದಿನಕ್ಕೆ ನಿರ್ಮಾಣ ವೆಚ್ಚಗಳು ಅಧಿಕವಾಗುತ್ತಿವೆಯಂತೆ.
ಲಾಕ್‍ಡೌನ್ ನಂತರ ಇಡೀ ಭಾರತೀಯ ಚಿತ್ರರಂಗವೇ ಮುಂದೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತಿರುವಾಗ, ಸುದೀಪ್ ಮತ್ತು ಮಂಜುನಾಥ್ ಗೌಡ ಮುಂದೆ ನಿಂತು `ಫ್ಯಾಂಟಮ್' ಚಿತ್ರದ ಚಿತ್ರೀಕರಣವನ್ನು ಶುರು ಮಾಡಿದರು. ಅದರಂತೆ ಜುಲೈ ಮಧ್ಯಭಾಗದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಯಿತು. ಸುದೀಪ್ ಸಹ ಆಗಿನಿಂದ ಇಲ್ಲಿಯವರೆಗೂ ಸತತವಾಗಿ ಚಿತ್ರೀಕರಣ ಮಾಡುತ್ತಲೇ ಇದ್ದು, ಮೂರು ತಿಂಗಳಾದರೂ ಇನ್ನು ಚಿತ್ರೀಕರಣ ಮುಗಿದಿಲ್ಲ. ಸದ್ಯಕ್ಕೆ ಮುಗಿಯುವಂತೆಯೂ ಕಾಣುತ್ತಿಲ್ಲ.
ನಿಧಾನಗತಿಯಲ್ಲಿ ಸಾಗುತ್ತಿರುವ ಚಿತ್ರೀಕರಣದಿಂದ ಚಿತ್ರ ವಿಳಂಬವಾಗತ್ತಿರುವುದಷ್ಟೇ ಅಲ್ಲ, ಇದರಿಂದ ನಿರ್ಮಾಣ ವೆಚ್ಚಗಳು ಸಹ ಹೆಚ್ಚುತ್ತಿದೆಯಂತೆ. ಇದರಿಂದ ನಿರ್ಮಾಪಕ ಮಂಜುನಾಥ ಗೌಡ ಅವರ ಕೈಯಲ್ಲಿ ಹಣ ಕಡಿಮೆಯಾಗುತ್ತಿದ್ದು, ಚಿತ್ರವನ್ನು ಮುಂದುವರೆಸಬೇಕೆಂದರೆ ಯಾರಾದರೂ ಇನ್ನಷ್ಟು ಹಣವನ್ನು ಹೂಡುವ ಸಂದರ್ಭ ಬಂದಿದೆಯಂತೆ.
ಹೀಗೆ ಸಹನಿರ್ಮಾಪಕರ ಹುಡುಕಾಟದಲ್ಲಿದ್ದಾಗ, ಸಿಕ್ಕಿದ್ದು ಅಲಂಕಾರ ಪಾಂಡಿಯನ್. ಇನ್ವೇನಿಯೋ ಫಿಲ್ಮ್ಸ್ ಎಂಬ ಸಂಸ್ಥೆಯಡಿ ಈ ಹಿಂದೆ ರಾಗಿಣಿ ಅಭಿನಯದ `ದಿ ಟೆರರಿಸ್ಟ್' ಚಿತ್ರವನ್ನು ನಿರ್ಮಿಸಿದ್ದರು. ಇದೀಗ ಪಿ.ಸಿ. ಶೇಖರ್ ನಿರ್ದೇಶನದ ಪ್ರಜ್ವಲ್ ದೇವರಾಜ್ ಅಭಿನಯದ ಹೊಸ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಮಧ್ಯೆ ಅಲಂಕಾರ್ ಪಾಂಡಿಯನ್ `ಫ್ಯಾಂಟಮ್' ಚಿತ್ರದ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ.