ಬೆಂಗಳೂರು:ಜನರ ಅಚ್ಚುಮೆಚ್ಚಿನ ಕಲಾವಿದರು ಕೊರೊನಾ ಕುರಿತು ನಾವೆಲ್ಲಾ ಬಹಳ ಎಚ್ಚರದಿಂದರಬೇಕು ಎಂಬ ಸಂದೇಶವನ್ನ ವೀಕ್ಷಕರಿಗೆ ನೀಡುತ್ತಾ ಬಂದಿದ್ದಾರೆ. ಸದ್ಯ ಕರ್ನಾಟಕದ ಮನೆ ಮಾತಾದ ಅಗ್ನಿಸಾಕ್ಷಿ ತಂಡವೀಗ ಜನರಿಗೆ ಕೊರೊನಾ ಸಂಬಂಧಿಸಿದಂತೆ ಎಚ್ಚರದಿಂದರಬೇಕು ಎಂದು ತಿಳಿಸಿದೆ.
'ಅಗ್ನಿಸಾಕ್ಷಿ'ಯಾಗಿ ಕಲಾವಿದರು ಹೇಳೋದೊಂದೇ.. ಎಲ್ರೂ ಮನೆಯಲ್ಲೇ ಇರಿ, ಕೊರೊನಾದಿಂದ ಎಚ್ಚರವಾಗಿರಿ.. - ಪಕೋಡ ಕಿರುಚಿತ್ರ
ಸದಾ ಶೂಟಿಂಗ್ ಶೂಟಿಂಗ್ ಶೂಟಿಂಗ್ ಎಂದು ಬ್ಯುಸಿ ಇರುತ್ತಿದ್ದ ಕಲಾವಿದರುಗಳು ಇದೀಗ ಮನೆಯಲ್ಲಿದ್ದು, ತಮ್ಮ ವೀಕ್ಷಕರಿಗೂ ಸಹ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಸಲಹೆ ನೀಡುತ್ತಿದ್ದಾರೆ.
ಕಳೆದ ಎಂಟು ವರ್ಷಗಳಿಂದ ವೀಕ್ಷಕರನ್ನು ಮನರಂಜಿಸುತ್ತಿದ್ದ ಅಗ್ನಿಸಾಕ್ಷಿ ತಂಡ ಇದೀಗ ಮತ್ತೆ ಒಂದಾಗಿದೆ. ಕೊರೊನಾ ಎಂಬ ಮಹಾಮರಿಯನ್ನು ಹೊಡೆದೋಡಿಸಲು ಮನೆಯಲ್ಲೇ ಇರಿ ಎಂಬ ಸಂದೇಶ ನೀಡುವ ಸಲುವಾಗಿ ಈ ತಂಡ ಮತ್ತೆ ಒಂದಾಗಿದೆ. ಪಕೋಡಾ ತಿನ್ನುವ ವಿಚಾರವನ್ನೇ ಕೇಂದ್ರವಾಗಿರಿಸಿಕೊಂಡು ತಯಾರಾದ ಕಿರುಚಿತ್ರದಲ್ಲಿ ಅಗ್ನಿಸಾಕ್ಷಿಯ ರಾಜೇಶ್ ಧ್ರುವ, ವಿಜಯ್ ಸೂರ್ಯ, ಸುಕೃತಾ ನಾಗ್, ಐಶ್ವರ್ಯ ಸಾಲಿಮಠ, ವೈಷ್ಣವಿ, ಅನುಷಾ ರಾವ್, ಸಂಪತ್, ಅಮಿತ್ ರಾವ್ ಮತ್ತು ಮುಖ್ಯಮಂತ್ರಿ ಚಂದ್ರು ಅವರು ಕೂಡಾ ನಟಿಸಿದ್ದಾರೆ.
ಎಲ್ಲರೂ ಅವರವರ ಮನೆಯಲ್ಲಿಯೇ ಶೂಟಿಂಗ್ ನಡೆಸಿದ್ದಾರೆ. ಭಾರತೀಯ ಚಿತ್ರರಂಗದ ಬೇರೆ-ಬೇರೆ ಭಾಷೆಗಳ ಜನಪ್ರಿಯ ನಟರಾಗಿರುವ ಅಮಿತಾಭ್ ಬಚ್ಚನ್, ಶಿವರಾಜ್‌ಕುಮಾರ್, ರಜನಿಕಾಂತ್, ಕಮಲ್ ಹಾಸನ್ ಮುಂತಾದವರು ಅಭಿನಯಿಸಿದ ಫ್ಯಾಮಿಲಿ ಕಿರುಚಿತ್ರ ಸಾಕಷ್ಟು ಜನಪ್ರಿಯವಾಗಿತ್ತು. ಅದರಿಂದ ಸ್ಫೂರ್ತಿ ಪಡೆದ ಅಗ್ನಿಸಾಕ್ಷಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ಅವರು ಈ ಪಕೋಡಾ ಕಿರುಚಿತ್ರಕ್ಕೆ ಮುಂದಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.