2005ರಲ್ಲಿ ಬಿಡುಗಡೆಯಾದ ನೆನೆಪಿರಲಿ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ವರ್ಷ ಇದೀಗ ಮನರಂಜನಾ ಮಾಧ್ಯಮಕ್ಕೆ ಮತ್ತೆ ವಾಪಸ್ ಆಗಿದ್ದಾರೆ. ಪಾಪಾ ಪಾಂಡು ಧಾರಾವಾಹಿ ಖ್ಯಾತಿಯ ನಟಿ ಶಾಲಿನಿ ಜೊತೆಗೆ ಕೈ ಜೋಡಿಸಿ ಯೂಟ್ಯೂಬ್ ಸಿರೀಸ್ ಪ್ರಾರಂಭಿಸಿದ್ದಾರೆ. ಹೌದು, ಶಾಲಿನಿ ಮತ್ತು ವರ್ಷ ''ಶಾಲಿವುಡ್'' ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸುತ್ತಿದೆ.
ನೆನಪಿರಲಿ ಸಿನಿಮಾದಲ್ಲಿ ನಟ ಪ್ರೇಮ್ಗೆ ನಾಯಕಿಯಾಗಿ ನಟಿ ವರ್ಷ ಅಭಿನಯಿಸಿದ್ದರು. ಸಿನಿಮಾದ ದ್ವಿತಿಯಾರ್ಧದಲ್ಲಿ ವರ್ಷ ನಟಿಸಿದ್ದಾದರೂ ಪಾತ್ರಕ್ಕೆ ತಕ್ಕಂತ ಅವರ ಅಭಿನಯ ಅಭಿಮಾನಿಗಳ ಮೆಚ್ಚುಗೆ ಗಳಿಸಿತ್ತು. ನಂತರ ನಟಿ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ನವಗ್ರಹ ಸಿನಿಮಾದಲ್ಲಿ ನಟಿಸಿದರು. ಅದಾದ ಬಳಿಕ ವರ್ಷ ನಟನೆಯಿಂದ ಕೊಂಚ ದೂರ ಸರಿದಿದ್ದು, ಸದ್ಯ ವಿವಾಹವಾಗಿ ಎರಡು ಮಕ್ಕಳಿದ್ದಾರೆ. 12 ವರ್ಷಗಳಿಂದ ವರ್ಷ ನಟನೆ ಮತ್ತು ಸಿನಿಮಾ ಸಂಬಂಧಿತ ಯಾವುದೇ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಇದೀಗ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ. ಪ್ರತೀ ವಾರ ಈ ಯೂಟ್ಯೂಬ್ ಚಾನೆಲ್ನಲ್ಲಿ ಹಾಸ್ಯಭರಿತ ಸಂಭಾಷಣೆಯ ಎಪಿಸೋಡ್ ಮಾಡುತ್ತಿದ್ದಾರೆ. ತಾಯಿ ಮತ್ತು ಮಗಳ ಪಾತ್ರದಲ್ಲಿ ಪಾಪಾ ಪಾಂಡು ಧಾರಾವಾಹಿ ಖ್ಯಾತಿಯ ನಟಿ ಶಾಲಿನಿ ಮತ್ತು ವರ್ಷ ಮಿಂಚುತ್ತಿದ್ದಾರೆ. ಅಂತೂ ಅನೇಕ ವರ್ಷಗಳ ಬಳಿಕ ನಟಿ ವರ್ಷ ಅಭಿಮಾನಿಗಳ ಎದುರು ಕಾಣಿಸಿಕೊಳ್ಳುತ್ತಿದ್ದಾರೆನ್ನುವುದು ಸಂತಸದ ವಿಚಾರ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ‘ಶಾಲಿವುಡ್’ ಸಿರೀಸ್ ವೈರಲ್ ಆಗಿದ್ದು, ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ನಟಿ ಶಾಲಿನಿ ಯುಟ್ಯೂಬ್ನಲ್ಲಿ ಶಾಲಿವುಡ್ ಎಂಬ ಚಾನೆಲ್ ತೆರೆದಿದ್ದಾರೆ. ಹಾಸ್ಯ ವಿಡಿಯೋಗಳು, ರೆಸಿಪಿ ಹಾಗೂ ಬ್ಯೂಟಿ ಟಿಪ್ಸ್ ಶೇರ್ ಮಾಡಿಕೊಳ್ಳುತ್ತಾರೆ. ಈ ಚಾನೆಲ್ನಲ್ಲಿ 'Mom & Me' ಎಂಬ ಸೀರಿಸ್ ಶುರು ಮಾಡಿದ್ದು, ಅಮ್ಮ-ಮಗಳ ನಡುವಿನ ಸಂಬಂಧ ಹೇಗಿರುತ್ತದೆ ಎಂದು ತೋರಿಸಿದ್ದಾರೆ.
ಇದರಲ್ಲಿ ವರ್ಷಾರನ್ನು ಮಗಳ ಪಾತ್ರದಲ್ಲಿ ನೋಡಬಹುದು. ಪ್ರತೀ ವಿಡಿಯೋ ರಿಲೀಸ್ ಆದ ದಿನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಡೇಟ್ ಮಾಡುತ್ತಾರೆ. ಎಲ್ಲಾ ಸರಣಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. 'ರಿಯಾಲಿಟಿಗೆ ತುಂಬಾ ಹತ್ತಿರವಾಗಿದೆ', 'ನಿಮ್ಮ ಆ್ಯಕ್ಟಿಂಗ್ ಸೂಪರ್' ಹಾಗೂ 'ಬೇಗ ದೊಡ್ಡ ಪರದೆ ಮೇಲೆ ಬನ್ನಿ ಮೇಡಂ' ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿರುತ್ತಾರೆ. ಸೀರಿಸ್ನಲ್ಲಿ ವರ್ಷಾ ಅವರ ಹೊಸ ಲುಕ್ ನೋಡಿ ಕೆಲವರು ಆರೋಗ್ಯದ ಬಗ್ಗೆ ಪ್ರಶ್ನಿಸಿದ್ದಾರೆ.