ರಂಗಭೂಮಿ ಮತ್ತು ಕನ್ನಡ ಚಿತ್ರರಂಗದಲ್ಲಿ ಮೂರೂವರೆ ದಶಕಗಳ ಕಾಲ ಮನೋಜ್ಞ ಅಭಿನಯದಿಂದ ಪ್ರೇಕ್ಷಕರನ್ನ ರಂಜಿಸುತ್ತಿರುವ ಅಭಿನೇತ್ರಿ ನಟಿ ಉಮಾಶ್ರೀ. ಸದ್ಯ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪುಟ್ನಂಜ ಖ್ಯಾತಿಯ ಪುಟ್ಮಲ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಮೇ 10, 1957ರಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಉಮಾಶ್ರೀ, ರಾಜ್ಯ ಹಾಗೂ ದೇಶ ಮೆಚ್ಚುವಂತಂಹ ದಿಟ್ಟ ಮಹಿಳೆಯಾಗಿ ಹೊರ ಹೊಮ್ಮಿದ್ದಾರೆ. 64ನೇ ಹುಟ್ಟುಹಬ್ಬದ ಖುಷಿಯಲ್ಲಿರುವ ಉಮಾಶ್ರೀ ಸಿನಿಮಾ ಜರ್ನಿಯ ಕಹಾನಿ ಇಲ್ಲಿದೆ.
ಕಡು ಬಡತನದಲ್ಲಿ ಹುಟ್ಟಿದ ಉಮಾಶ್ರೀ ತುತ್ತು ಅನ್ನಕ್ಕೂ ಕಷ್ಟ ಪಟ್ಟಿದ್ದಾರೆ. ಯಾವುದೇ ಸಿನಿಮಾ ಬ್ಯಾಕ್ಗ್ರೌಂಡ್ ಇಲ್ಲದೆ ಚಿತ್ರಾನ್ನ ಸಿಗುತ್ತೆ ಎಂಬ ಕಾರಣಕ್ಕೆ ಉಮಾಶ್ರೀ ನಾಟಕಗಳಲ್ಲಿ ಅಭಿನಯಿಸೋದಿಕ್ಕೆ ಶುರು ಮಾಡ್ತಾರೆ. ಹೊಟ್ಟೆ ತುಂಬಿಸಿಕೊಳ್ಳಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಉಮಾಶ್ರೀ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ.ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ನಿರ್ದೇಶನಗಳಲ್ಲಿ ಅಭಿನಯಿಸುವ ಅವಕಾಶ ಸಿಗುತ್ತದೆ. ಈ ರಂಗಭೂಮಿಯಲ್ಲಿ ಉಮಾಶ್ರೀಗೆ ಒಡಲಾಳ ನಾಟಕದ ಸಾಕವ್ವನ ಪಾತ್ರ ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತದೆ. ಇಲ್ಲಿಂದ ಉಮಾಶ್ರೀ ನಾಟಕದ ಬದುಕಿಗೆ ದೊಡ್ಡ ತಿರುವು ಸಿಗುತ್ತದೆ.
ರಂಗಭೂಮಿಯಲ್ಲಿ ತಮ್ಮ ಅದ್ಭುತ ನಟನೆಯಿಂದ ಪ್ರಸಿದ್ಧಿ ಪಡೆದಿದ್ದ ಉಮಾಶ್ರೀಗೆ ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶ ಒದಗಿ ಬರುತ್ತದೆ. 1984ರಲ್ಲಿ ನಟ, ನಿರ್ದೇಶಕ ಕಾಶಿನಾಥ್ ನಟಿಸಿ, ನಿರ್ದೇಶನ ಮಾಡಿದ ಅನುಭವ ಚಿತ್ರದಲ್ಲಿ ಉಮಾಶ್ರೀ ಬೋಲ್ಡ್ ಆಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯುತ್ತಾರೆ.