ಹಿರಿಯ ನಟಿ ಶ್ರುತಿ 4 ದಿನಗಳ ಹಿಂದಷ್ಟೇ 45ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. 'ಶ್ರುತಿ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ಶ್ರುತಿ, ಸುಮಾರು 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಸೆಂಟಿಮೆಂಟ್ ಪಾತ್ರಗಳಲ್ಲೇ ಅವರು ಹೆಚ್ಚು ನಟಿಸಿದ್ದಾರೆ.
ಅಳುಮುಂಜಿ ಎಂದೇ ಹೆಸರಾದ ಶ್ರುತಿ, ದಿಗ್ಗಜ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶನದ 'ಕಲ್ಕಿ' ಚಿತ್ರದಲ್ಲಿ ನಟಿಸಿ ಪ್ರಶಸ್ತಿ ಪಡೆದವರು. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ 'ರಾಮ ಶ್ಯಾಮ ಭಾಮ' ಚಿತ್ರದಲ್ಲಿ ಹಾಸ್ಯದ ಮೂಲಕ ಸಿನಿಪ್ರಿಯರನ್ನು ನಕ್ಕು ನಲಿಸಿದ್ದರು. ಇತ್ತೀಚೆಗೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರುತಿ, ಚಿತ್ರೀಕರಣದ ಸ್ಥಳದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ಸುಮಾರು 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾವಂತೆ ಸಿನಿಮಾದಲ್ಲಿ ನಾನು ಸುಮಾರು 200 ಮಕ್ಕಳಿಗೆ ಜನ್ಮ ನೀಡಿರಬಹುದು, ಹಳ್ಳಿಯೊಂದರಲ್ಲಿ ಚಿತ್ರವೊಂದರ ಶೂಟಿಂಗ್ ನಡೆಯುತ್ತಿತ್ತು. ಆ ದೃಶ್ಯದಲ್ಲಿ ನಾನು ಗರ್ಭಿಣಿ ಪಾತ್ರ ಮಾಡುತ್ತಿದ್ದೆ. ನನ್ನ ಬಳಿ ಬಂದ ಮಹಿಳೆಯೊಬ್ಬರು, ಎಷ್ಟು ತಿಂಗಳು, ನಿನ್ನ ಗಂಡ ಏನು ಮಾಡುತ್ತಿದ್ದಾರೆ ಎಂದು ಕೇಳಿದರಂತೆ. ಅದಕ್ಕೆ ಏನು ಹೇಳಲು ತೋಚದೆ ಶ್ರುತಿ, ಸಹಾಯಕ ನಿರ್ದೇಶಕನನ್ನು ಕರೆದಿದ್ದಾರೆ. ಅದಕ್ಕೆ ಕೋಪಗೊಂಡ ಆ ಹೆಂಗಸು, ಏನವ್ವ ಗಂಡ ಯಾರು ಹಾಗೂ ಎಷ್ಟು ತಿಂಗಳು ಅಂತ ಕೇಳಿದರೆ ಪರ ಪುರುಷನ ಹತ್ತಿರ ಕೇಳ್ತೀಯಲ್ಲ ಎಂದರಂತೆ. ಆಗ ಶ್ರುತಿ ಅವರಿಗೆ ನಗು ತಡೆಯಲಾಗಲಿಲ್ಲವಂತೆ.
ಸೆಂಟಿಮೆಂಟ್ ಮಾತ್ರವಲ್ಲ ಉತ್ತಮ ಹಾಸ್ಯಪ್ರಜ್ಞೆ ಇರುವ ಕಲಾವಿದೆ ಶ್ರುತಿ ಅನೇಕ ಸಿನಿಮಾಗಳಲ್ಲಿ ಗರ್ಭಿಣಿ ಪಾತ್ರ ಮಾಡಿರುವುದರಿಂದ ಆ ಸಮಯದಲ್ಲಿ ಶ್ರುತಿ ಮನೆಯಲ್ಲಿ ಮೂರು, ಆರು, ಒಂಬತ್ತು ತಿಂಗಳ ಗರ್ಭಿಣಿಗೆ ಸರಿ ಹೊಂದುವಂತ ಸ್ಪಾಂಜ್ ಶೇಖರಿಸಿ ಇಟ್ಟಿದ್ದರಂತೆ. ಮತ್ತೊಮ್ಮೆ 9 ತಿಂಗಳ ಗರ್ಭಿಣಿ ಪಾತ್ರ ಮಾಡುವ ಚಿತ್ರೀಕರಣದ ಸಮಯದಲ್ಲಿ ಜೋರಾಗಿ ಮಳೆ ಬಂದಿದೆ. ಇವರು ಹೊಟ್ಟೆಗೆ ಹಾಕಿಕೊಂಡಿದ್ದ ಸ್ಪಾಂಜ್ ನೀರು ಹೀರಿಕೊಂಡಿದೆ. ಒಂದು ಕಡೆ ಅದು ಇವರಿಗೆ ಭಾರ ಆಗುತ್ತಿದೆ, ನಿರ್ದೇಶಕರು ಶಾಟ್ ರೆಡಿಯಾಗಿದೆ ಎಂದು ಹೇಳಿದಾಗ ಆ ಸ್ಪಾಂಜ್ನಲ್ಲಿದ್ದ ನೀರನ್ನು ಹಿಂಡಿ ನೀರು ತೆಗೆದು ಶಾಟ್ಗೆ ರೆಡಿ ಆದೆ ಎಂದು ಹಳೆಯ ದಿನಗಳನ್ನು ನೆನೆದು ನಗುತ್ತಾರೆ ಶ್ರುತಿ.