ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ ಸಂಚಾರಿ ಪೊಲೀಸರು ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಏಪ್ರಿಲ್ 4 ರಂದು ನಟಿ ಶರ್ಮಿಳಾ ಮಾಂಡ್ರೆ, ಸ್ನೇಹಿತರೊಂದಿಗೆ ಚಲಿಸುತ್ತಿದ್ದ ಕಾರು ಹೈಗ್ರೌಂಡ್ ಸಂಚಾರಿ ಠಾಣಾ ವ್ಯಾಪ್ತಿಯ ವಸಂತನಗರದ ಕೆಳ ಸೇತುವೆ ಬಳಿ ಪಿಲ್ಲರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ಕೇಸ್ ದಾಖಲಾಗಿತ್ತು. ಆದರೆ ಇದೀಗ ಹೈಗ್ರೌಂಡ್ ಸಂಚಾರಿ ಠಾಣಾ ಪೊಲೀಸರು ನಟಿಗೆ ಕ್ಲೀನ್ ಚಿಟ್ ನೀಡಿದ್ದು 4ನೇ ಎಸಿಎಂ ಸಂಚಾರ ವಿಭಾಗದ ನ್ಯಾಯಾಲಯಕ್ಕೆ 33 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ಅಪಘಾತಕ್ಕೆ ಚಾಲಕನ ಅಜಾಕರೂಕತೆಯೇ ಕಾರಣ ಎಂದು ಹೇಳಲಾಗಿದೆ.
ಕಾರು ಚಾಲಕ ಥಾಮಸ್ ಅತಿ ವೇಗವಾಗಿ ಕಾರು ಚಲಾಯಿಸಿದ್ದಕ್ಕೆ ಕಾರು ಪಿಲ್ಲರ್ಗೆ ಡಿಕ್ಕಿ ಹೊಡೆದು ಕಾರಿನ ಹಿಂಬದಿ ಕುಳಿತಿದ್ದ ನಟಿಗೆ ಗಾಯವಾಗಿತ್ತು ಎನ್ನಲಾಗಿದೆ. ಘಟನೆ ವೇಳೆ ಕೆಳಿ ಬಂದ ಶೀಪಾ, ಲೊಕೇಶ್ ಕುಮಾರ್, ನಿಖಿಲ್ ಹೆಸರನ್ನು ಹಾಗೂ ಅಪಘಾತ ಕುರಿತ ಎಫ್ಐಆರ್ನಲ್ಲಿ ಶರ್ಮಿಳಾ ಮಾಂಡ್ರೆ ಹೆಸರನ್ನು ಉಲ್ಲೇಖಿಸಿಲ್ಲ ಎನ್ನಲಾಗಿದೆ.
ಪಿಲ್ಲರ್ಗೆ ಡಿಕ್ಕಿ ಹೊಡೆದಿರುವ ಶರ್ಮಿಳಾ ಮಾಂಡ್ರೆ ಕಾರು ಏಪ್ರಿಲ್ 4 ರಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಈ ಅಪಘಾತ ಜರುಗಿದ್ದು ಈ ಲಾಕ್ ಡೌನ್ ಸಮಯದಲ್ಲಿ ನಟಿ ಹೊರಗೆ ಬರುವ ಅವಶ್ಯಕತೆ ಏನಿತ್ತು ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ನಾನು ಔಷಧ ತರಲೆಂದು ಹೊರಗೆ ಬಂದಿದ್ದೆ ಎಂದು ಶರ್ಮಿಳಾ ಮಾಂಡ್ರೆ ವಿಚಾರಣೆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಮಯದಲ್ಲಿ ನಟಿಗೆ ಕ್ಲೀನ್ ಚಿಟ್ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎನ್ನಲಾಗುತ್ತಿದೆ.