ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಬಂಧಿತರಾಗಿ ಜಾಮೀನಿನ ಮೇರೆಗೆ ಹೊರಗಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಸೇರಿದಂತೆ ಇನ್ನಿತರ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ವರದಿ ಬಗ್ಗೆ ಸಂಜನಾ ಗಲ್ರಾನಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ "ನಾನು ಪೇನ್ ಕಿಲ್ಲರ್ ಹಾಗೂ ನಿದ್ರೆ ಬರಲು ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ. ದಿನಕ್ಕೆ 16 ಮಾತ್ರೆಗಳನ್ನು ತಗೆದುಕೊಳ್ಳುತ್ತೇನೆ. ಎಫ್ಎಸ್ಎಲ್ ವರದಿಯಲ್ಲಿ ಬಂದಿರೋದು ನಿಜ. ಆದರೆ ನನ್ನ ಮೇಲಿನ ಆರೋಪಗಳು ಆಧಾರ ರಹಿತ" ಎಂದು ಹೇಳಿದ್ದಾರೆ.
ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಡ್ರಗ್ಸ್ ಸೇವಿಸಿರುವುದು ಎಫ್ಎಸ್ಎಲ್ ಪರೀಕ್ಷೆಯಿಂದ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಸಂಜನಾ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ತಾಯಿ ರೇಷ್ಮಾ ತಿಳಿಸಿದ್ದರು. ಇನ್ನು ಡ್ರಗ್ ಸೇವನೆ ಸುದ್ಧಿ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಅಷ್ಟೇ ಅಲ್ಲದೆ ನನಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಸರ್ಜರಿ ಆಗಿ ಮನೆಗೆ ಬಂದಿದ್ದೀನಿ ಅಂತಾ ಸಂಜನಾ ಗಲ್ರಾನಿ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಜಾಮೀನಿನ ಮೇಲೆ ಹೊರಗಡೆ ಬಂದ ಮೇಲೆ ಸಂಜನಾ ಗಲ್ರಾನಿ, ಕೊರೊನಾ ಸಮಯದಲ್ಲಿ ಸಾವಿರಾರು ಜನರ ಹಸಿವನ್ನು ನೀಗಿಸುವ ಕೆಲಸ ಮಾಡಿದ್ದರು. ಆದರೆ ಪ್ರಯೋಗಾಲಯದ ವರದಿ ಬಂದ ಮೇಲೆ ಸಂಜನಾ ಗಲ್ರಾನಿ ಈಗ ಆಸ್ಪತ್ರೆಗೆ ದಾಖಲಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.