ತಮ್ಮ ಸಿನಿ ಕರಿಯರ್ನ ನಾಲ್ಕು ವರ್ಷಗಳಲ್ಲಿ 9 ಸಿನಿಮಾಗಳಲ್ಲಿ ನಟಿಸಿರುವ ಈ ಸೌತ್ ಸುಂದರಿ, ತಮ್ಮ ಹೆಸರಿಗೆ ಒಂದು ಕಪ್ಪು ಚುಕ್ಕೆಯನ್ನೂ ಅಂಟಿಸಿಕೊಂಡಿಲ್ಲ. ಚಿತ್ರಗಳನ್ನು ಒಪ್ಪುವ ಮುಂಚೆ ನೂರಾರು ಬಾರಿ ಯೋಚಿಸುತ್ತಾರೆ. ಲಿಪ್ಲಾಕ್, ಹಸಿಬಿಸಿ ದೃಶ್ಯಗಳಿರುವ ಸಿನಿಮಾಗಳನ್ನು ಎಂದೂ ಒಪ್ಪಿಕೊಂಡಿಲ್ಲ. ಜಾಸ್ತಿ ಎಕ್ಸ್ಪೋಸ್ ಬಯಸುವ, ತುಟಿಗೆ ತುಟಿ ಸೇರಿಸುವ ಸಿನಿಮಾಗಳಲ್ಲಿ ನಟಿಸಬಾರದು ಎನ್ನುವ ಶಿಸ್ತುಬದ್ಧ ನಿಮಯ ಪಾಲಿಸಿಕೊಂಡು ಬಂದಿದ್ದಾರೆ. ಅವರ ಈ ಕಠೋರ ಸ್ವಯಂ ಕಟ್ಟಳೆಯಿಂದ ಸಾಕಷ್ಟು ಸಿನಿಮಾಗಳನ್ನೂ ಕಳೆದುಕೊಂಡಿದ್ದಾರೆ.
ಆ ಒಂದೇ ಒಂದು ಕಾರಣಕ್ಕೆ ವಿಜಯ್ ಸಿನಿಮಾ ರಿಜೆಕ್ಟ್ ಮಾಡಿದ್ರಂತೆ ಪಲ್ಲವಿ - ಡಿಯರ್ ಕಾಮ್ರೇಡ್
ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅವರಂತಹ ನಟಿಯರು ಅಪರೂಪ. ಕೆಲವೊಂದು ಕಟ್ಟುಪಾಡುಗಳನ್ನು ಕಟ್ಟಿಕೊಂಡು ಚಿತ್ರರಂಗದಲ್ಲಿ ಭದ್ರ ನೆಲೆಯೂರಿದ ನಟಿಯರಲ್ಲಿ ಈ ಪ್ರೇಮಂ ಚೆಲುವೆ ಕೂಡ ಒಬ್ಬರು.
'ಕಸ ತಿನ್ನುವುದಕ್ಕಿಂತ ತುಸು ತಿನ್ನುವುದು ಲೇಸು' ಎನ್ನುವ ಗಾದೆ ಮಾತಿನಂತೆ ಬದುಕುತ್ತಿರುವ ಸಾಯಿ, ಕಡಿಮೆ ಚಿತ್ರಗಳಲ್ಲಿ ನಟಿಸಿದ್ದರೂ ಅವು ಸೂಪರ್ ಹಿಟ್ ಆಗಿವೆ. ಒಂದು ಚಿತ್ರದಲ್ಲಿಯ ಅವರ ಪಾತ್ರ ಕಿಸ್ ಹಾಗೂ ಇಂಟಿಮೇಟ್ ಸೀನ್ಗಳನ್ನು ಬಯಸಿದ್ದರೆ ಅದನ್ನು ಹಿಂದೆಮುಂದೆ ನೋಡದೇ ನಿರಾಕರಿಸುತ್ತಾರೆ. ಇದೇ ಕಾರಣಕ್ಕೆ ಮಣಿರತ್ನಂ ಅವರ 'ಕಾಟ್ರು ವೆಲಿಯಾಡೈ' ಸಿನಿಮಾ ಕೂಡ ರಿಜೆಕ್ಟ್ ಮಾಡಿದ್ದಾರೆ. ಈಗ ಈ ಲಿಸ್ಟ್ಗೆ ಮತ್ತೊಂದು ಸಿನಿಮಾ ಸೇರಿಕೊಂಡಿದೆ. ಅದು ವಿಜಯ್ ದೇವರಕೊಂಡ ನಟನೆಯ 'ಡಿಯರ್ ಕಾಮ್ರೇಡ್' ಸಿನಿಮಾ.
ಸದ್ಯ ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರದ ಲಿಲ್ಲಿ ಪಾತ್ರಕ್ಕೆ ಮೊದಲು ಸಾಯಿ ಪಲ್ಲವಿ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ, ಈ ಚಿತ್ರದಲ್ಲಿ ಕಿಸ್ ಸೀನ್ಗಳಿರುವುದರಿಂದ ಅವರು ಒಪ್ಪಿಕೊಳ್ಳಲಿಲ್ವಂತೆ. ನಂತರ ರಶ್ಮಿಕಾ ಮಂದಣ್ಣ ಅವರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಡಿಯರ್ ಕಾಮ್ರೇಡ್ನ ಟೀಸರ್ ಹಾಗೂ ಟ್ರೇಲರ್ನಲ್ಲಿ ಕೆಲವು ಚುಂಬನ ಸೀನ್ಗಳು ಹೈಲೈಟ್ ಆಗಿವೆ. ಇಂತಹ ಸಿನಿಮಾ ಒಪ್ಪಿಕೊಳ್ಳದ ಸಾಯಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.