ಬೆಂಗಳೂರು: ನನ್ನ ಮಗಳು ಸಿಂಹಿಣಿ ಇದ್ದ ಹಾಗೆ ಯಾರಿಗೂ ಹೆದರುವುದಿಲ್ಲ, ಎಲ್ಲವನ್ನು ಗೆದ್ದು ಬರುತ್ತಾಳೆ ಎಂದು ರಾಗಿಣಿ ತಾಯಿ ರೋಹಿಣಿ ದ್ವಿವೇದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ಮಗಳ ಭೇಟಿಗೆ ಬಂದ ರೋಹಿಣಿ ಅವರಿಗೆ ಜೈಲಾಧಿಕಾರಿಗಳು ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಮೊನ್ನೆಯವರೆಗೆ ಜೊತೆ ಇದ್ದವರು ಇಂದು ಇಲ್ಲ. ಮಗಳ ಹೆಸರು ಹೇಳಿ ತಪ್ಪು ಮಾಡಿದ್ದಾರೆ. ನಮಗೆ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಗಿಣಿ ಕುರಿತು ವಿಶ್ವಾಸ ವ್ಯಕ್ತಪಡಿಸಿದ ತಾಯಿ ರೋಹಿಣಿ ದ್ವಿವೇದಿ ಕನ್ನಡ ಚಿತ್ರೋದ್ಯಮಕ್ಕೆ ಹತ್ತು ವರ್ಷದಿಂದ ಅವಳು ಸೇವೆ ಸಲ್ಲಿಸಿದ್ದಾಳೆ. ನಾವು ತುಂಬಾ ನೋವಿನಲ್ಲಿ ಇದ್ದೇವೆ. ನಮ್ಮದು ಮೂರು ಪ್ಲಾಟ್ಗಳು ಇವೆ ಎನ್ನುವುದು ಸುಳ್ಳು. ನಮಗೆ ಒಂದೇ ಪ್ಲಾಟ್ ಇದೆ. ಈ ಕುರಿತು ಜಾರಿ ನಿರ್ದೇಶಾಲಯ (ಇ.ಡಿ)ಕ್ಕೆ ಎಲ್ಲಾ ಮಾಹಿತಿಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.
ನನ್ನ ಮಗಳು ಕಷ್ಟ ಪಟ್ಟು ಹೆಸರು ಮಾಡಿದ್ದಾಳೆ. ರಾಜಕಾರಣಿಗಳು, ಪೊಲೀಸರು ಜೊತೆ ನನ್ನ ಮಗಳ ಸಂಪರ್ಕ ಇಲ್ಲ. ಸದ್ಯ ನಾವು ಯಾರ ಹೆಸರನ್ನು ಹೇಳಲು ಬಯಸುವುದಿಲ್ಲ. ಸಮಯ ಬಂದಾಗ ಎಲ್ಲವನ್ನು ಹೇಳುತ್ತೇವೆ ಎಂದರು.