ಕನ್ನಡ ಚಿತ್ರರಂಗದಲ್ಲಿ ಹೈಪ್ರೊಫೈಲ್ ಹೀರೋ ಎಂದು ಜನಪ್ರಿಯರಾಗಿದ್ದವರು ಪುನೀತ್ ರಾಜ್‌ಕುಮಾರ್. ಅಭಿಮಾನಿಗಳ ನಗುಮುಖದ ರಾಜಕುಮಾರ ಅಂತಾ ಮೆಚ್ಚುಗೆಗಳಿಸಿದ್ದ ಪವರ್‌ಸ್ಟಾರ್ ನಿಧನ ಹೊಂದಿದ ಸಮಯದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ಹಾಗು ರಾಜಕಾರಣಿಗಳು ನಟನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು.
ಆದರೆ ಪುನೀತ್ ಕುಟುಂಬದ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದ ರಾಧಿಕಾ ಪಂಡಿತ್(Radhika Pandit) ಪುನೀತ್ ನಿಧನದ ವೇಳೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ಇದೀಗ ರಾಧಿಕಾ ಪಂಡಿತ್, ಪುನೀತ್ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. "ನೀವಿಲ್ಲ ಎಂಬುದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ನಿಮ್ಮ ಜಾಗವನ್ನು ಕನ್ನಡ ಚಿತ್ರರಂಗದಲ್ಲಿ ತುಂಬಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ನೀವಿಲ್ಲದೆ ಚಿತ್ರರಂಗ ಎಂದಿನಂತಿರುವುದಿಲ್ಲ. ನಿಮ್ಮ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನಮ್ಮೆಲ್ಲರ ನೆನಪಿನಲ್ಲಿ ನೀವೀಗ ಎಂದಿಗಿಂತಲೂ ಸನಿಹ" ಎಂದು ಬರೆದಿದ್ದಾರೆ.
ಇದಕ್ಕೆ ಕಮೆಂಟ್ ಮಾಡಿರುವ ಜನರು ಅಪ್ಪು ಬಗ್ಗೆ ಪೋಸ್ಟ್ ಮಾಡೋಕೆ ಇಷ್ಟು ದಿನ ಬೇಕಾಯಿತೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಅಂತಿಮ ದರ್ಶನ ಏಕೆ ಪಡೆದಿಲ್ಲ ಎಂದೆಲ್ಲಾ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಧಿಕಾ ಪಂಡಿತ್, "ನಾನು ಅಂತಿಮ ದರ್ಶನ ಪಡೆದೆನೋ,ಇಲ್ಲವೋ ಎಂಬುದು ಅವರ ಕುಟುಂಬಕ್ಕೆ ಮತ್ತು ನಮಗೆ ತಿಳಿದಿದೆ. ಕ್ಯಾಮೆರಾ ಮುಂದೆ ಬಂದು ಮಾತನಾಡುವ ಶಕ್ತಿ ನನಗಿರಲಿಲ್ಲ. ಕ್ಯಾಮರಾ ಮುಂದೆ ಬಂದು ಮಾತನಾಡದೆ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಲಿರಲಿಲ್ಲ".
"ಅಪ್ಪು ಸರ್ ಅಗಲಿಕೆ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಾದ ನಿಮಗೆ ಎಷ್ಟು ನೋವು ನೀಡುತ್ತಿದೆಯೋ, ಅಷ್ಟೇ ನೋವು ನನಗೂ ನಮ್ಮ ಕುಟುಂಬಕ್ಕೂ ಆಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಅಗಲಿಕೆ ಎಲ್ಲರಿಗೂ ತುಂಬಾಲಾರದ ನಷ್ಟ" ಎಂದು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.