ಬೆಂಗಳೂರು:ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನೆಲೆಯಲ್ಲಿ ಸದಾಶಿವನಗರದ ಅಪ್ಪು ನಿವಾಸಕ್ಕೆ ನಟಿ ರಾಗಿಣಿ ದ್ವಿವೇದಿ ಭೇಟಿ ನೀಡಿ ಪುನೀತ್ ಪತ್ನಿ ಅಶ್ವಿನಿ ಹಾಗೂ ಶಿವಣ್ಣನಿಗೆ ಸಾಂತ್ವನ ಹೇಳಿದರು.
ಅಪ್ಪು ಮನೆಗೆ ಭೇಟಿ ನೀಡಿದ ರಾಗಿಣಿ ದ್ವಿವೇದಿ: ಪತ್ನಿ ಅಶ್ವಿನಿ, ಶಿವಣ್ಣನಿಗೆ ಸಾಂತ್ವನ - ಪುನೀತ್ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ ರಾಗಿಣಿ ದ್ವಿವೇದಿ
ಹೃದಯಸ್ತಂಭನದಿಂದ ನಿಧನರಾದ ಸ್ಯಾಂಡಲ್ವುಡ್ ನಟ ಪುನೀತ್ ರಾಜ್‌ಕುಮಾರ್ ಅವರ ನಿವಾಸಕ್ಕೆ ನಟಿ ರಾಗಿಣಿ ದ್ವಿವೇದಿ ಭೇಟಿ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, 'ಪುನೀತ್ ನಿಧನದ ಸುದ್ದಿ ಕೇಳಿ ಮಾತುಗಳು ಬರುತ್ತಿಲ್ಲ. ಅಪ್ಪು ನಮ್ಮ ಜೊತೆಗಿಲ್ಲ ಎಂಬ ವಿಷಯವನ್ನು ನಂಬುವುದಕ್ಕೆ ಸಾಧ್ಯವಿಲ್ಲ. ಯಾವಾಗಲೂ ನಗುನಗುತ್ತಾ, ಎಲ್ಲರೊಂದಿಗೆ ಆತ್ಮೀಯವಾಗಿದ್ದ ವ್ಯಕ್ತಿ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು, ನಂಬಲು ಆಸಾಧ್ಯ' ಎಂದು ಬೇಸರ ವ್ಯಕ್ತಪಡಿಸಿದರು.
'ಅಪ್ಪು ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ನಾವು ಒಟ್ಟಿಗೆ ಕೆಲಸ ಮಾಡಲು ಅವಕಾಶ ಸಿಗಲಿಲ್ಲ. ಆದರೆ ಹಲವು ಬ್ರಾಂಡ್ಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ಅವರಿಗೆ ನಮ್ಮ ಚಿತ್ರರಂಗದ ಬಗ್ಗೆ ತುಂಬಾ ಒಳ್ಳೆ ವಿಶನ್ ಇತ್ತು. ಅಶ್ವಿನಿ ಹಾಗೂ ಶಿವಣ್ಣ ಅವರಿಗೆ ದು:ಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬೇಡಿಕೊಳ್ಳುವೆ' ಎಂದರು.