ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ಕ್ವೀನ್ ಆಗಿ ಬೆಳ್ಳಿತೆರೆ ಮೇಲೆ ವಿಜೃಂಭಿಸಿದವರು ನಟಿ ಮಾಲಾಶ್ರೀ. 1990ರ ದಶಕದಲ್ಲಿ ಸಿನಿಪ್ರಿಯರ ಕನಸಿನ ರಾಣಿಯಾಗಿ ಮೆರೆದ ಮಾಲಾಶ್ರೀ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಆದ್ರೆ ಪತಿ ಸಾವಿನ ಹಿನ್ನೆಲೆ ಬೇಸರದಿಂದಿರುವ ಅವರು ಯಾವುದೇ ಅಚರಣೆಗೆ ಉತ್ಸಾಹ ತೋರಿಸಿಲ್ಲ.
ಆಗಸ್ಟ್ 10, 1973ರಲ್ಲಿ ಚೆನ್ನೈನಲ್ಲಿ ಜನಿಸಿ, ಬಾಲ್ಯದಿಂದಲೇ ಸ್ಟಾರ್ ಚೈಲ್ಡ್ ಆರ್ಟಿಸ್ಟ್ ಆಗಿ ಮಿಂಚಿದ ತೆಲುಗು ಅಮ್ಮಾಯಿ ಇವತ್ತು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷ ಪತಿ ರಾಮು, ಇಬ್ಬರು ಮಕ್ಕಳು ಹಾಗು ಸ್ನೇಹಿತರ ಜೊತೆ ಇವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಪತಿ ರಾಮು ನಿಧನದಿಂದ ನೊಂದಿದ್ದು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ.
90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಲಾಶ್ರೀ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಆಗಿದ್ದೇ ಕುತೂಹಲಕಾರಿ ಸಂಗತಿ. ದುರ್ಗಾಶ್ರೀ ಅನ್ನೋದು ಮಾಲಾಶ್ರೀಯವರ ನಿಜವಾದ ಹೆಸರು. ಈ ಹೆಸರಿನಿಂದಲೇ ದುರ್ಗಾಶ್ರೀ ಬಾಲ್ಯದಲ್ಲೇ ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ 36ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರೋದು ವಿಶೇಷವಾಗಿದೆ. ಮಾಲಾಶ್ರೀ ಹೇಳುವ ಹಾಗೆ, 36 ಚಿತ್ರಗಳಲ್ಲಿ 26 ಬಾರಿ ಹುಡುಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ:
ಚಿಕ್ಕ ವಯಸ್ಸಿನಲ್ಲಿ ಬಾಲನಟಿಯಾಗಿ ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಮಿಂಚಿದ ದುರ್ಗಾಶ್ರೀ, ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಆಶ್ರಯದಲ್ಲಿ 1989ರಲ್ಲಿ ಬಂದ ನಂಜುಂಡಿ ಕಲ್ಯಾಣ ಸಿನಿಮಾಕ್ಕಾಗಿ ದುರ್ಗಾಶ್ರೀಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ದುರ್ಗಾಶ್ರೀ ಸೌಂದರ್ಯ ಹಾಗು ಬಾಡಿ ಲ್ಯಾಂಗ್ವೇಜ್ ನೋಡಿ ಪಾರ್ವತಮ್ಮ ರಾಜ್‍ಕುಮಾರ್ ಅವರು ದುರ್ಗಾಶ್ರೀ ಹೆಸರು ತೆಗೆದು, ಮಾಲಾಶ್ರೀ ಎಂದು ನಾಮಕರಣ ಮಾಡಿದ್ದರು. ಬಹುಶಃ ಪಾರ್ವತಮ್ಮ ರಾಜ್‍ಕುಮಾರ್ ಇಟ್ಟ ಈ ಹೆಸರಿನಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗುತ್ತಾರೆ ಅಂತಾ ಸ್ವತಃ ಮಾಲಾಶ್ರೀ ಕೂಡ ಅಂದುಕೊಂಡಿರಲಿಲ್ಲ.