ಪತಿ, ನಿರ್ಮಾಪಕ ಕೋಟಿ ರಾಮು ಅವರ ನಿಧನದಿಂದ ಕಂಗಾಲಾಗಿದ್ದ ನಟಿ ಮಾಲಾಶ್ರೀ ಇದೀಗ ಮಾತನಾಡಿದ್ದಾರೆ. ಸಾಮಾನ್ಯವಾಗಿ ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ಮಾಲಾಶ್ರೀ ಕಳೆದ ಹಲವು ದಿನಗಳಿಂದ ಯಾವುದೇ ಪೋಸ್ಟ್ ಹಾಕಿರಲಿಲ್ಲ. ತಮಿಳು ನಟ ವಿವೇಕ್ ಅವರ ನಿಧನದ ನಂತರ, ಅವರ ಸಾವಿಗೆ ಸಂತಾಪ ಸೂಚಿಸಿದ್ದೇ ಕೊನೆಯಾಗಿತ್ತು. ಆ ನಂತರ ಮಾಲಾಶ್ರೀ ಯಾವುದೇ ಪೋಸ್ಟ್ ಹಾಕಿರಲಿಲ್ಲ. ಇದೀಗ ತಮ್ಮ ಕಷ್ಟದ ಸಮಯದಲ್ಲಿ ತಮಗೆ ನೆರವಾದವರಿಗೆ ಟ್ವೀಟ್ ಮೂಲಕ ಧನ್ಯವಾದಗಳನ್ನು ಹೇಳಿದ್ದಾರೆ.
ಕಷ್ಟದ ಸಮಯದಲ್ಲಿ ನೆರವಾದವರಿಗೆ ಭಾವುಕ ಪತ್ರದ ಮೂಲಕ ಧನ್ಯವಾದ ತಿಳಿಸಿದ ಮಾಲಾಶ್ರೀ - ಸ್ಯಾಂಡಲ್ವುಡ್ ಕೊರೊನಾ ಸುದ್ದಿ
ಪತಿ ರಾಮು ನಿಧನದ ನೋವಿನಲ್ಲಿರುವ ನಟಿ ಮಾಲಾಶ್ರೀ, ತಮ್ಮ ಕಷ್ಟದ ಸಮಯದಲ್ಲಿ ತಮಗೆ ನೆರವಾದವರಿಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ
"ಕಳೆದ 15 ದಿನಗಳು ನಮ್ಮ ಪಾಲಿಗೆ ಅತ್ಯಂತ ನೋವಿನ ದಿನಗಳಾಗಿದ್ದವು. ಏನು ಮಾಡಬೇಕು ಎಂದು ಗೊತ್ತಾಗದಾಗಿತ್ತು. ಪತಿ ರಾಮು ಅವರ ನಿಧನದಿಂದ ನಮ್ಮೆಲ್ಲರ ಹೃದಯ ಚೂರುಚೂರಾಗಿತ್ತು. ನಮ್ಮೆಲ್ಲರ ಆಧಾರಸ್ತಂಭ ಅವರಾಗಿದ್ದರು. ಅವರ ನಿಧನದ ವಾರ್ತೆ ಕೇಳಿ, ಇಡೀ ಚಿತ್ರರಂಗ ಪ್ರತಿಕ್ರಿಯಿಸಿದ ರೀತಿ ನೋಡಿ ದುಃಖ ಉಮ್ಮಳಿಸಿ ಬಂತು. ರಾಮು ಮೇಲೆ ಎಲ್ಲರೂ ಇಟ್ಟಿರುವ ಪ್ರೀತಿ ಮತ್ತು ಇಂತಹ ಸಮಯದಲ್ಲಿ ಎಲ್ಲರೂ ಕೊಟ್ಟ ಸಹಕಾರವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ನಮಗೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ ಹೇಳುವುದಕ್ಕೆ ಬಯಸುತ್ತೇನೆ. ಕಲಾವಿದರು, ತಂತ್ರಜ್ಞರು, ಮಾಧ್ಯಮದವರು, ರಾಮು ಅವರ ಸ್ನೇಹಿತರು, ಅಭಿಮಾನಿಗಳು ಮತ್ತು ಹಿತೈಷಿಗಳೆಲ್ಲರೂ ಇಂತಹ ಕಷ್ಟಕಾಲದಲ್ಲಿ ನಮ್ಮ ಜೊತೆಗೆ ನಿಂತಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು" ಎಂದು ಮಾಲಾಶ್ರೀ ಟ್ವೀಟ್ ಮಾಡಿದ್ದಾರೆ.
ರಾಮು ಅವರು ಏಪ್ರಿಲ್ 26ರಂದು ಕೊರೊನಾದಿಂದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಸಂದರ್ಭದಲ್ಲಿ ಜನತಾ ಕರ್ಫ್ಯೂ ಇದ್ದ ಕಾರಣ, ಅವರ ಅಂತ್ಯಕ್ರಿಯೆಯಲ್ಲಿ ಚಿತ್ರರಂಗದ ಯಾರೊಬ್ಬರೂ ಭಾಗವಹಿಸುವುದಕ್ಕೆ ಸಾಧ್ಯವಾಗಲಿಲ್ಲ. ಎಲ್ಲರೂ ಸೋಷಿಯಲ್ ಮೀಡಿಯಾ ಮೂಲಕ ರಾಮು ಅವರ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ, ಮಾಲಾಶ್ರೀ ಅವರಿಗೆ ಧೈರ್ಯ ತುಂಬಿದ್ದರು.