ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಟೂಲ್ ಕಿಟ್ ರೂಪಿಸಿದ ಆರೋಪದ ಮೇರೆಗೆ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ಬಂಧಿಸಲಾಗಿದೆ. ದಿಶಾ ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಬಾಲಿವುಡ್, ಸ್ಯಾಂಡಲ್ವುಡ್ ನಟ-ನಟಿಯರು ಕೂಡಾ ದಿಶಾ ರವಿ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಟಿ, ಮಾಜಿ ಸಂಸದೆ ರಮ್ಯ ಕೂಡಾ ದಿಶಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ದಿಶಾ ರವಿ ಪರ ದನಿಯೆತ್ತಿದ ನಟಿ, ಮಾಜಿ ಸಂಸದೆ ರಮ್ಯ - Farmer protest Tool kit
ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಸ್ಯಾಂಡಲ್ವುಡ್ ನಟಿ, ಮಾಜಿ ಸಂಸದೆ ರಮ್ಯ ಕೂಡಾ ದಿಶಾ ಪರ ನಿಂತಿದ್ದು ಆಕೆಯ ಬಂಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾಗ್ ಅಶ್ವಿನ್ ಸಿನಿಮಾದಲ್ಲಿ ಪ್ರಭಾಸ್, ಬಿಗ್ಬಿ, ದೀಪಿಕಾ ಪಡುಕೋಣೆ
ದಿಶಾ ರವಿಗೆ ಬೆಂಬಲ ವ್ಯಕ್ತಪಡಿಸಿರುವ ರಮ್ಯ ಆಕೆ ಪರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ನಾವೆಲ್ಲರೂ ದಿಶಾ ಪರ ನಿಲ್ಲಬೇಕು, ಅವರು ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆಯೇ ಹೊರತು ಯಾವ ಅಪರಾಧವನ್ನೂ ಮಾಡಿಲ್ಲ. ದಿಶಾ ರವಿಯನ್ನು ಇಂದು ಪೊಲೀಸರು ಬಂಧಿಸಲು ನಾವು ಪರೋಕ್ಷವಾಗಿ ಕಾರಣರಾಗಿದ್ದೇವೆ. ಆಕೆ ಮುಗ್ಧ ಹೆಣ್ಣುಮಗಳು, ನಾವೆಲ್ಲರೂ ಆಕೆಯ ಪರ ನಿಲ್ಲಬೇಕು. ನಮ್ಮದು ಪ್ರಜಾಪ್ರಭುತ್ವ ದೇಶ, ರೈತರ ಪರ ದನಿ ಎತ್ತುವ ಸ್ವಾತಂತ್ರ್ಯ ಕೂಡಾ ದಿಶಾಗೆ ಇಲ್ಲವೇ...? ಈ ಘಟನೆಯಿಂದ ನಾವೆಲ್ಲರೂ ಜೈಲಿನಲ್ಲಿ ಇರುವಂತೆ ಭಾಸವಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಏನೇ ಪ್ರತಿಭಟನೆ ನಡೆದರೂ ಟೂಲ್ ಕಿಟ್ ತಯಾರು ಮಾಡಲಾಗುತ್ತದೆ. ಅದೇ ರೀತಿ ದಿಶಾ ರವಿ ಕೂಡಾ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಟೂಲ್ ಕಿಟ್ ತಿದ್ದಿದ್ದಾರೆ. ಇದು ದೊಡ್ಡ ತಪ್ಪಾ...? ಟೂಲ್ ಕಿಟ್ ತಯಾರಿಸುವವರೆಲ್ಲಾ ಉಗ್ರರೇ..? ಗ್ರೇಟಾ ಥನ್ ಬರ್ಗ್ ಟ್ವೀಟ್ ಮಾಡಿದ್ದ ಟೂಲ್ ಕಿಟ್ಟನ್ನು ಅನೇಕರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವರೆಲ್ಲರನ್ನೂ ಬಂಧಿಸುತ್ತೀರಾ..? ಎಂದು ರಮ್ಯ ಪ್ರಶ್ನಿಸಿದ್ದಾರೆ.