ಮಂಗಳೂರು ಮೂಲದ ಬಹುಭಾಷಾ ನಟಿ ಎಸ್ತರ್ ನರೊನ್ಹಾ ಕನ್ನಡಕ್ಕಿಂತ ಇತರೆ ಭಾಷೆಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡವರು. ತೆಲುಗು, ಹಿಂದಿ, ಕೊಂಕಣಿ ಹಾಗೂ ಮಲಯಾಳಂ ಸಿನಿರಂಗದಲ್ಲಿ ಮಿಂಚುತ್ತಿರುವ ಪ್ರತಿಭಾನ್ವಿತ ನಟಿಗೆ ಅಭಿಮಾನಿಗಳ ಕೊರತೆ ಇಲ್ಲ.
ಕನ್ನಡದ 'ಲಂಕೆ' ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಇವರು, ಚಿತ್ರರಂಗಕ್ಕೆ ಬಂದಿದ್ದು ಮಾತ್ರ ಅಚ್ಚರಿ. ತಮ್ಮ ಸಿನಿಪಯಣದ ಬಗ್ಗೆ ಎಸ್ತರ್ ನೊರೊನ್ಹಾ ಈಟಿವಿ ಭಾರತದ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
'ಎಸ್ತರ್ ನೊರೊನ್ಹಾ ಅಂದಾಕ್ಷಣ ಸಹಜವಾಗಿ ಮಲೆಯಾಳಿ ಅಂತಾರೆ. ಬೈಬಲ್ನಿಂದ ಹೆಸರು ಹುಡುಕಿ ನನ್ನ ತಂದೆ-ತಾಯಿ ನನಗೆ ಹೆಸರಿಟ್ಟರು. ನಾನು ಕನ್ನಡದ ಹುಡುಗಿ, ಮಂಗಳೂರಿನವಳು. ಆದರೆ, ಓದಿದ್ದು ಮುಂಬೈಯಲ್ಲಿ. ಹೀಗಾಗಿ, ಹಿಂದಿ ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಬಂದೆ'.
'ನಂತರ ನಾನು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ನನಗೆ ಹೆಸರು ತಂದುಕೊಟ್ಟಿದ್ದು ಭೀಮವರಂ ಬುಲ್ಲೋಡು ಚಿತ್ರ. ಆ ನಂತರ ನುಗ್ಗೆಕಾಯಿ, ಉಸಿರಿಗಿಂತ ನೀನೇ ಹತ್ತಿರ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದೆ. ಆದರೆ, ಎಸ್ತರ್ ನೊರೊನ್ಹಾಗೆ ಹೆಸರು ತಂದು ಕೊಟ್ಟಿದ್ದು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಸಿನಿಮಾ. ಈ ಚಿತ್ರ ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿದೆ' ಎಂದು ಹರ್ಷ ವ್ಯಕ್ತಪಡಿಸಿದರು.
ಸಿನಿ ಪಯಣದ ಬಗ್ಗೆ ನಟಿ ಎಸ್ತರ್ ನರೊನ್ಹಾ ಮಾತು 'ಈಗ ಸ್ಯಾಂಡಲ್ವುಡ್ನಲ್ಲಿ ಹೊಸ ನಿರ್ದೇಶಕರು, ಹೊಸ ಕಥೆಗಳನ್ನು ಮಾಡುತ್ತಿದ್ದಾರೆ. ನಾನು ವಿಭಿನ್ನ ರೀತಿಯಲ್ಲಿ ಪಾತ್ರಗಳನ್ನು ಮಾಡುವುದಕ್ಕೆ ಇಚ್ಚಿಸುತ್ತೇನೆ' ಎನ್ನುತ್ತಾರೆ ಎಸ್ತಾರ್.
'ಸಂಚಾರಿ ವಿಜಯ್ ಜೊತೆ ನಟಿಸಿದ ಕ್ಷಣ ಯಾವತ್ತೂ ಮರೆಯೋಕೆ ಆಗಲ್ಲ. ಅವರ ಸಾವಿನ ಹಿಂದಿನ ದಿನ ನಾಳೆ ಮಾತನಾಡುತ್ತೇನೆ ಅಂತಾ ಹೇಳಿ ಫೋನ್ ಇಟ್ಟರು. ಆದರೆ, ಮರುದಿನ ಅವರ ಆಘಾತಕಾರಿ ಸುದ್ದಿ ಬಂತು. ಸಂಚಾರಿ ವಿಜಯ್ ಜೊತೆ ನಾನು ಅಭಿನಯಿಸಿದ್ದು ನನ್ನ ಅದೃಷ್ಟ. ಹಾಗೆಯೇ ಅವರು ಸಾಕಷ್ಟು ವಿಷಯಗಳ ಬಗ್ಗೆ ತಿಳಿದುಕೊಂಡಿದ್ದ ವ್ಯಕ್ತಿ. ಅಂತಹವರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದು, ಲೈಫ್ ಟೈಮ್ನಲ್ಲಿ ಉಳಿಯುವ ನೆನಪು' ಎಂದರು.
ಎಸ್ತರ್ ನೊರೊನ್ಹಾ ನಾಯಕಿ, ಗಾಯಕಿ ಮಾತ್ರವಲ್ಲ, ಸಂಗೀತ ನಿರ್ದೇಶಕಿಯೂ ಹೌದು. ಇದು ಅದೆಷ್ಟೋ ಜನರಿಗೆ ಗೊತ್ತಿಲ್ಲದ ಸಂಗತಿ. ತನಗೆ ಸಂಗೀತದ ವ್ಯಾಮೋಹ ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಬಂದಿತು ಎನ್ನುತ್ತಾರೆ ಎಸ್ತರ್.
'ನನಗೆ ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸಿತ್ತು. ಆದರೆ, ಸಿನಿಮಾ ನಿರ್ದೇಶಕರು ನನ್ನಲ್ಲಿರುವ ಪ್ರತಿಭೆ ಗುರುತಿಸಿ ನಾಯಕಿಯನ್ನಾಗಿ ಮಾಡಿದ್ದಾರೆ. ಆದರೆ ನನಗಿನ್ನೂ ಸಂಪೂರ್ಣವಾಗಿ ವಿಶ್ವಾಸ ಬಂದಿಲ್ಲ. ಇನ್ನು ಸಿನಿಮಾದಲ್ಲಿ ನನಗೆ ಜೀವನದಲ್ಲಿ ಒಂದೇ ರೀತಿಯ ಪಾತ್ರಗಳನ್ನು ಮಾಡಲು ಇಷ್ಟವಿಲ್ಲ. ಮಹಿಳಾ ಪ್ರಧಾನ, ರಾಜಕೀಯ, ಐತಿಹಾಸಿಕ ಸಿನಿಮಾ ಮಾಡಬೇಕು ಎಂಬ ಮಹದಾಸೆ ಇದೆ. ಇದರ ಜೊತೆಗೆ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಜೊತೆ ನಟಿಸಬೇಕೆಂಬ ಆಸೆ ಇದೆ. ಸುದೀಪ್ ನಟನೆಯ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ನನಗಿಷ್ಟ' ಅಂತಾರೆ ಎಸ್ತರ್.
ಇದನ್ನೂ ಓದಿ:ಹೆರಿಗೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರುತ್.. ಮಗುವಿನ ತಂದೆ ಬಗ್ಗೆ ಪ್ರತಿಕ್ರಿಯೆ ಏನು?