ಕನ್ನಡ ಚಿತ್ರಗಳ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿ, ಪರಭಾಷೆಗಳಲ್ಲಿ ಮಿಂಚಿ ಮತ್ತೆ ಕನ್ನಡಕ್ಕೆ ಬಂದ ನಟಿಯರು ಹಲವರಿದ್ದಾರೆ. ಇದರಲ್ಲಿ ಅಶ್ವಿನಿ ಚಂದ್ರಶೇಖರ್ ಸಹ ಒಬ್ಬರು.
ಮಲೆನಾಡಿನ ಹುಡುಗಿ ಅಶ್ವನಿ ಕನ್ನಡದಲ್ಲಿ 'ಎಂದೆಂದಿಗೂ', 'ಒಂದು ರೊಮ್ಯಾಂಟಿಕ್ ಕ್ರೈಂ ಕಥೆ', 'ಪ್ರೇಮ ಪಲ್ಲಕ್ಕಿ' ಹಾಗೂ 'ಅಕ್ಟೋಪಸ್' ಚಿತ್ರಗಳಲ್ಲಿ ಅಭಿನಯಿಸಿ, ಆನಂತರ ಕಾಲಿವುಡ್ಗೆ ಹಾರಿದ್ದರು. ತಮಿಳಿನ ಮೆರ್ಲಿನ್, ಮಾರ್ಗತ ಕಾಡು, ತೆಲುಗಿನ 'ಆವು ಪುಲಿ ಮಧ್ಯಾಲೋ ಪ್ರಭಾಸ್ ಪೆಳ್ಲಿ ಹಾಗೂ ಮಲಯಾಳಂನ ಸಿನಿಮಾದಲ್ಲಿ ಅಭಿನಯಿಸಿ, ಈಗ ಮತ್ತೆ ಕನ್ನಡಕ್ಕೆ ‘ನೋಟಗಾರ’ ಸಿನಿಮಾ ಮೂಲಕ ವಾಪಸ್ ಆಗಿದ್ದಾರೆ.
‘ನೋಟಗಾರ’, ಬೆಳ್ಳುಡಿ ಸಿನಿಮಾಸ್ ಅಡಿಯಲ್ಲಿ ಪರಮೇಶಿ.ಎ.ಎಚ್ ಹಾಗೂ ಹರ್ಷ ಬೆಳ್ಳುಡಿ ನಿರ್ಮಾಣ ಮಾಡುತ್ತಿರುವ ಚಿತ್ರ. ಈಗಾಗಲೇ ಬೆಂಗಳೂರು ಮತ್ತು ತೀರ್ಥಹಳ್ಳಿಯಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ. ಹಾಡುಗಳ ಚಿತ್ರೀಕರಣ ಸಧ್ಯದಲ್ಲೇ ಆರಂಭವಾಗಲಿದೆ.
‘ನೋಟಗಾರ’ ಚಿತ್ರದಲ್ಲಿ ಅಶ್ವಿನಿ ಜೊತೆಗೆ ಸಿದ್ದು ಮೂಲಿಮನಿ ನಾಯಕಾಗಿ ಅಭಿನಯಿಸುತ್ತಿದ್ದಾರೆ. ಮಂಜು ಹೆದ್ದೂರು ನಿರ್ದೇಶನದ ಈ ಚಿತ್ರದಲ್ಲಿ ಮೋಹನ್ ಜುನೇಜ, ಪ್ರಕಾಶ್ ತುಮಿನಾಡು, ನಾಗೇಶ್ ಮಯ್ಯ, ಪೃಥ್ವಿ ರಾಜ್, ವಿನಯ್ ಕಣಿವೆ ಹಾಗೂ ಮುಂತಾದವರು ನಟಿಸಿದ್ದಾರೆ. ಮಂಜು ಹೆದ್ದೂರು ನಿರ್ದೇಶನದ ಜತೆಗೆ ವಿಶೇಷ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಭರ್ಜರಿ ಚೇತನ್ ಕುಮಾರ್ ಬರೆದಿರುವ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದಾರೆ. ಎಂ.ಬಿ ಅಲ್ಲಿಕಲ್ಲಿ ಛಾಯಾಗ್ರಹಣ, ವಿನಯ್ ಕುಮಾರ್ ಸಂಕಲನ ಇದೆ. ವಾಗೀಶ್ ಎಚ್.ಪಿ ಕಾರ್ಯಕಾರಿ ನಿರ್ಮಾಪಕರು.