ಹೈದರಾಬಾದ್ (ತೆಲಂಗಾಣ): 'ಬಾಹುಬಲಿ' ಖ್ಯಾತಿಯ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್‌ಆರ್‌ಆರ್’ (RRR) ಚಿತ್ರದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದ್ದು, ಚಿತ್ರ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಆರ್ ಆರ್ ಆರ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ರಾಜಮೌಳಿ, ಅಜಯ್ ದೇವ್ಗನ್, ಆಲಿಯಾ ಭಟ್, ಜೂನಿಯರ್ ಎನ್ಟಿಆರ್ ವೇದಿಕೆ ಮೇಲಿದ್ದು, ಎಲ್ಲರ ಗಮನ ಸೆಳೆದರು. ಆಲಿಯಾ ಭಟ್ ಕೆಂಪು ಸೀರೆಯನ್ನು ಧರಿಸಿ ಕಾರ್ಯಕ್ರಮದ ಆಕರ್ಷಣೀಯ ಬಿಂದುವಾಗಿ ಗುರುತಿಸಿಕೊಂಡರು.
ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ವರದಿಗಾರರೊಬ್ಬರು ಆರ್ ಅಕ್ಷರ ನಿಮಗೆ ಲಕ್ಕಿ ಅಕ್ಷರವೇ ಎಂದು ಕೇಳಿದ್ದಾರೆ. ಇದನ್ನು ಕೇಳಿದ ಆಲಿಯಾ ಅವರ ಮುಖ ಕೆಂಪೇರಿ, ನಾಚಿ ನೀರಾಗಿದ್ದಾರೆ. ಇದಕ್ಕೆ ನನ್ನ ಬಳಿ ಉತ್ತರವಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದರು. ಆದರೂ ಉತ್ತರ ಹೇಳಬೇಕೆಂದು ಎಲ್ಲರೂ ಕೇಳಿಕೊಂಡಿದ್ದು, ವೇದಿಕೆ ಮೇಲಿದ್ದ ಚಿತ್ರತಂಡದವರೂ ನಗುವಂತೆ ಮಾಡಿತು.