ಕರ್ನಾಟಕ

karnataka

ETV Bharat / sitara

ಬಾಡಿಗೆ ಮನೆ ಬಿಕ್ಕಟ್ಟು... ಮತ್ತೆ ಕೋರ್ಟ್​ ಮೆಟ್ಟಿಲೇರಿದ್ರು ಯಶ್​ ತಾಯಿ

ಬನಶಂಕರಿಯ ಬಾಡಿಗೆ ಮನೆ ವಿಚಾರವಾಗಿ ನಟ ಯಶ್ ತಾಯಿ ಪುಷ್ಪಾ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ​ಮನೆ ಖಾಲಿ ಮಾಡಲು ಕಾಲಾವಕಾಶ ಕೋರಿ ಇಂದು ಹೈಕೋರ್ಟ್​​ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ನಟ ಯಶ್​

By

Published : Mar 22, 2019, 9:41 PM IST

ಬೆಂಗಳೂರು: ಬಾಡಿಗೆ ಮನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಕಿಂಗ್ ಸ್ಟಾರ್​ ಯಶ್​ ಅವರ ತಾಯಿ ಮತ್ತೆ ಕೋರ್ಟ್​ ಮೆಟ್ಟಿಲೇರಿದ್ದಾರೆ. ​

ಹಾಸನದಲ್ಲಿ ಹೊಸದಾಗಿ ಸ್ವಂತ ಮನೆ ನಿರ್ಮಿಸುತ್ತಿದ್ದೇವೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಬೇಕು. ಅಲ್ಲಿಯವರೆಗೆ ಈ ಬಾಡಿಗೆ ಮನೆಯಲ್ಲೇ ವಾಸಿಸಲು ಅವಕಾಶ ನೀಡುವಂತೆ ಹೈಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ವಾರದಲ್ಲೇ ಅರ್ಜಿ ವಿಚಾರಣೆಗೆ ಬರುವ ಸಾದ್ಯತೆಯಿದೆ.

ಬಾಡಿಗೆ ಮನೆ ಗೊಂದಲದ ಹಿನ್ನೆಲೆ :

ಬನಶಂಕರಿ 3 ನೇ ಬ್ಲಾಕ್, 6ನೇ ಕ್ರಾಸ್​ನಲ್ಲಿರುವ ‌ಎಂ. ಮುನಿಪ್ರಸಾದ್ - ವನಜಾ ವೈದ್ಯ ದಂಪತಿಗೆ ಸೇರಿದ ಮನೆಯಲ್ಲಿ ಯಶ್ ಕುಟುಂಬ 2010 ಅಕ್ಟೋಬರ್​ನಿಂದ ವಾಸವಿದೆ. ಇದಕ್ಕೆ ತಿಂಗಳಿಗೆ 40 ಸಾವಿರ ಬಾಡಿಗೆ ಫಿಕ್ಸ್ ಆಗಿದೆ. ಆದರೆ, 2013 ರಿಂದ ಬಾಡಿಗೆ ಹಣ ಪಾವತಿಸಿಲ್ಲ ಎಂದು ಆರೋಪಿಸಿದ್ದ ಮನೆ ಮಾಲೀಕರು 2015 ರಲ್ಲಿ ಮನೆ ಖಾಲಿ ಮಾಡಲು ಸೂಚಿಸಿದ್ದರು. ಆದರೆ, ಇದಕ್ಕೆ ಯಶ್ ಕುಟುಂಬ ಒಪ್ಪಿರಲಿಲ್ಲ. ಪರಿಣಾಮ ಮಾಲೀಕರು 43ನೇ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ 2013 ರಿಂದ ಇಲ್ಲಿಯ ತನಕ ಪ್ರತಿ ತಿಂಗಳು 40 ಸಾವಿರದಂತೆ ಬಾಡಿಗೆ ಹಣ ನೀಡಲು ತಾಕೀತು ಮಾಡಿತ್ತು. ಜೊತೆಗೆ 9% ಬಡ್ಡಿಯನ್ನು ಸಹ ನೀಡುವಂತೆ ಸೂಚಿಸಿತ್ತು. ಇದನ್ನ ಪ್ರಶ್ನಿಸಿ ಯಶ್ ತಾಯಿ ಪುಷ್ಪಾ ಮತ್ತೆ ಹೈಕೋರ್ಟ್ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿದ್ದರು.

ಈ ವೇಳೆ ಹೈಕೋರ್ಟ್​​​ನಲ್ಲಿ ಯಶ್ ಕುಟುಂಬಕ್ಕೆ ಭಾರಿ ಹಿನ್ನಡೆಯಾಗಿತ್ತು. ಕಳೆದ ಸೆಪ್ಟೆಂಬರ್​ 5 ರಂದು ಹೈಕೋರ್ಟ್ ದ್ವಿಸದಸ್ಯ ಪೀಠ ಅರ್ಜಿ ವಜಾಗೊಳಿಸಿ, ಬಾಡಿಗೆ ಹಣ ಪಾವತಿಸಿದರೆ 2019ರ ಮಾರ್ಚ್ 31ರ ತನಕ ಮನೆ ವಾಸಕ್ಕೆ ಅನುಮತಿಯಿದೆ ಎಂದು ಹೇಳಿತ್ತು. ಜೊತೆಗೆ ಸಿಟಿ ಸಿವಿಲ್ ಕೋರ್ಟ್ ವಿಧಿಸಿದ್ದ ಬಡ್ಡಿಯನ್ನು 9% ನಿಂದ 6% ಗೆ ಇಳಿಸಿತ್ತು. ನ್ಯಾಯಾಲಯದ ಅದೇಶದಂತೆ ಕಳೆದ ಜನವರಿಯಲ್ಲಿ 23 ಲಕ್ಷ ರೂಪಾಯಿ ಬಾಡಿಗೆ ಹಣ ಪಾವತಿಸಲು ಪುಷ್ಪಾ ನಿರ್ಧರಿಸಿದ್ದರು. ಆದರೆ, ಇದೀಗ ಮನೆ ಖಾಲಿ ಮಾಡಲು ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ABOUT THE AUTHOR

...view details