ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದಿನಿ' ಧಾರಾವಾಹಿಯಲ್ಲಿ ನಾಯಕ ವಿರಾಟ್ ಪಾತ್ರಧಾರಿಯಾಗಿ ಮಿಂಚುತ್ತಿರುವ ವಿನಯ್ ಗೌಡ ನಟನೆಗೆ ಮನಸೋಲದವರಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಯಸದೇ ಬಳಿ ಬಂದೆ' ಧಾರಾವಾಹಿಯಲ್ಲಿ ನಾಯಕ ಜೀವನಾಗಿ ಕಾಣಿಸಿಕೊಳ್ಳುತ್ತಿರುವ ವಿನಯ್ ಗೌಡ ಕಿರುತೆರೆ ವೀಕ್ಷಕರ ಪಾಲಿಗೆ 'ಮಹಾದೇವ'!
'ಚಿಟ್ಟೆ ಹೆಜ್ಜೆ' ಧಾರಾವಾಹಿಯ ಮೂಲಕ ನಟನಾ ಪಯಣ ಆರಂಭಿಸಿದ್ದ ಇವರು, ನಂತರ 'ಸಿ.ಐ.ಡಿ ಕರ್ನಾಟಕ'ದಲ್ಲಿ ಬಣ್ಣ ಹಚ್ಚಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಂಬಾರಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಮುಂದೆ 'ಶುಭ ವಿವಾಹ' ಮತ್ತು 'ಅಮ್ಮ' ಧಾರಾವಾಹಿಗಳಲ್ಲಿ ಖಳ ನಾಯಕನ ಪಾತ್ರಕ್ಕೆ ಜೀವ ತುಂಬಿದ ವಿನಯ್ಗೆ ಹೆಸರು ತಂದುಕೊಟ್ಟದ್ದೇ ಈ ಮಹಾದೇವನ ಪಾತ್ರ.
'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಮಹಾದೇವನಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಿನಯ್ ಗೌಡ, ಪೌರಾಣಿಕ ಪಾತ್ರಕ್ಕೂ ಸೈ ಎನಿಸಿಕೊಂಡರು. ಇದರ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೈ ಹನುಮಾನ್'ದಲ್ಲಿ ನಾಯಕನಾಗಿ ಅಭಿನಯಿಸಿರುವ ವಿನಯ್, ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ತಮ್ಮ ನಟನಾ ಛಾಪು ಮೂಡಿಸಿದ್ದಾರೆ.
‘ನನ್ನ ಇಷ್ಟದ ದೇವರು ಶಿವ. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಹಾದೇವನಾಗಿ ನಟಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ’ ಎನ್ನುತ್ತಾರೆ ವಿನಯ್. ಅಲ್ಲದೆ ಮಹಾದೇವ ಪಾತ್ರ ಮಾಡುವುದರಿಂದ ವಿನಯ್ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಿದೆಯಂತೆ. ಮಹಾದೇವನ ಪಾತ್ರದಿಂದಾಗಿ ತಾಳ್ಮೆ ಹೆಚ್ಚಾಗಿದೆ. ಮಾಂಸಾಹಾರವನ್ನು ಬಿಟ್ಟಿರುವ ಇವರು ಪಾರ್ಟಿಗೆ ಹೋಗುವುದಿಲ್ಲವಂತೆ. ಇದರ ಜೊತೆಗೆ ಸಿಗರೇಟ್ ಸೇದುವುದನ್ನೂ ತ್ಯಜಿಸಿರುವ ವಿನಯ್ ಪ್ರತಿದಿನ ಧ್ಯಾನ ಮಾಡಲು ಮುಂದಾಗಿದ್ದಾರೆ.
ಇವರು ನೀನಾಸಂ ಸತೀಶ್ ಅಭಿನಯದ ರಾಕೆಟ್ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿದ್ದರು. ಅಲ್ಲದೆ 'ಅವನಲ್ಲಿ ಇವಳಿಲ್ಲಿ' ಮತ್ತು 'ಮೂಟೆ' ಚಿತ್ರದಲ್ಲಿ ಖಳನಾಯಕನಾಗಿ ಗುರುತಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ಜೊತೆಗೆ 'ಶಿವಾಜಿ ಸರ್ಕಲ್'ನಲ್ಲಿಯೂ ಇನಯ್ ಅಭಿನಯಿಸಿದ್ದಾರೆ.