ಪಾತ್ರಕ್ಕಾಗಿ ವರ್ಕೌಟ್ ಮಾಡೋದರಲ್ಲಿ ಬಾಲಿವುಡ್ ನಟರು ಮುಂದು ಎನ್ನುವ ಮಾತಿತ್ತು. ಇದೀಗ ಅದು ಸ್ಯಾಂಡಲ್ವುಡ್ಗೂ ವ್ಯಾಪಿಸಿದೆ. ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಚಂದನವನದ ನಟರು ಜಿಮ್ನಲ್ಲಿ ಹಾರ್ಡ್ವರ್ಕ್ ಮಾಡಿ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹ ಹದಗೊಳಿಸುತ್ತಿದ್ದಾರೆ.
ಇತ್ತೀಚಿಗೆ ನಟ ಧ್ರುವ ಸರ್ಜಾ ‘ಪೊಗರು’ ಸಿನಿಮಾದಲ್ಲಿ ಶಾಲಾ ಹುಡುಗನ ಹಾಗೆ ಕಾಣಲು 20 ಕೆಜಿ ತೂಕ ಇಳಿಸಿಕೊಂಡಿದ್ದರು. ವಿನೋದ್ ಪ್ರಭಾಕರ್ ‘ರಗ್ಗಡ್’ ಸಿನಿಮಾಕ್ಕೆ 8 ಪ್ಯಾಕ್ ಗಳಿಸಲು ಕಷ್ಟ ಪಟ್ಟಿದ್ದರು. ಶಿವಣ್ಣ ಸಹ ಅವರ ಹಿಂದಿನ ಸಿನಿಮಾಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಬೆವರು ಸುರಿಸಿದ್ದರು. ಪೈಲ್ವಾನ್ ಚಿತ್ರಕ್ಕೆ ಕಿಚ್ಚ ಸುದೀಪ್ ಕಸರತ್ತು ಜೋರಾಗೆ ಇತ್ತು. ಐರಾವತ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವ್ಯಾಯಾಮ ಮಾಡಿ ಪೊಲೀಸ್ ಅಧಿಕಾರಿ ಹಾಗೂ ಫಿಟ್ ಆಗುವಂತೆ ದೇಹ ದಂಡಿಸಿದ್ದರು. ಈಗ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಸರದಿ. ‘ಮಾಲ್ಗುಡಿ ಡೇಸ್’ ಸಿನಿಮಾಕ್ಕೆ ಅವರು 18 ಕೆಜಿ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.