ಮುಂಬೈ:ಹೆಂಡತಿ ಜೊತೆಗೆ ಗಂಡ ನಡೆಸುವ ಬಲವಂತದ(ಒತ್ತಾಯ ಪೂರ್ವಕ) ಲೈಂಗಿಕ ಕ್ರಿಯೆ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿದ್ದು, ಇದಕ್ಕೆ ಬಾಲಿವುಡ್ ನಟಿ ತಾಪ್ಸಿ ಪನ್ನು ಕೆಂಡಾಮಂಡಲವಾಗಿದ್ದು, ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಅವರು, ಇದೊಂದು ಕೇಳುವುದು ಬಾಕಿ ಉಳಿದಿತ್ತು ಎಂದು ಟ್ವಿಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಿಂಗರ್ ಸೋನು ಮೋಹಾಪಾತ್ರ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯೊಬ್ಬಳು, ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಪತಿ ವಿರುದ್ಧ ಸೆಕ್ಷನ್ 376(ಅತ್ಯಾಚಾರ) ಅಡಿ ಹಲವು ಆರೋಪಗಳನ್ನು ಮಾಡಿ ಕೋರ್ಟ್ ಮೆಟ್ಟಿಲೇರಿದ್ದಳು. ವಿಚಾರಣೆ ನಡೆಸಿದ ನ್ಯಾಯಾಲಯ ಆತನನ್ನು ನಿರಪರಾಧಿ ಎಂದು ರಿಲೀಸ್ ಮಾಡಿತ್ತು.
ಇದನ್ನೂ ಓದಿರಿ: ಪತಿ ಜತೆಗಿನ ಸಂಭೋಗವು ಬಲವಂತದಿಂದಾದರೂ, ಒಪ್ಪಿಗೆಯಿಂದಾದರೂ ಅಪರಾಧವಲ್ಲ: ಛತ್ತೀಸ್ಗಢ ಹೈಕೋರ್ಟ್
ಆದರೂ, ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಹಿಳೆ ಸೆಕ್ಷನ್ 498 ಎ (ಮಹಿಳೆಯರಿಗೆ ಕ್ರೌರ್ಯಕ್ಕೆ ಸಂಬಂಧಿಸಿ), 377 (ಅಸಹಜ ಸಂಭೋಗ)ದಡಿ ಪ್ರಕರಣಗಳನ್ನು ದಾಖಲಿಸಿದ್ದಾಳೆ. ಮದುವೆಯಾದ ಕೆಲ ದಿನಗಳ ಬಳಿಕ ಪತಿಯ ಕುಟುಂಬಸ್ಥರು ಕ್ರೌರ್ಯ, ನಿಂದನೆ ಮತ್ತು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ. ಅಲ್ಲದೇ, ಆತ ಸಂಭೋಗದ ವೇಳೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದನು ಎಂದು ಆರೋಪಿಸಿದ್ದಳು.
ಇದರ ವಿಚಾರಣೆ ನಡೆಸಿದ ಕೋರ್ಟ್, ಇಬ್ಬರು ಕಾನೂನು ಬದ್ಧವಾಗಿ ಮದುವೆ ಮಾಡಿಕೊಂಡಿದ್ದಾರೆ. ಹೀಗಾಗಿ ಪತ್ನಿಯೊಂದಿಗೆ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ. ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದರೂ ಕೂಡ ಅದನ್ನ ರೇಪ್ ಅನ್ನಲು ಸಾಧ್ಯವಿಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು. ಇತ್ತೀಚೆಗಷ್ಟೇ, ವೈವಾಹಿಕ ಅತ್ಯಾಚಾರವು ಭಾರತೀಯ ಕಾನೂನಿನ ಪ್ರಕಾರ ಕ್ರಿಮಿನಲ್ ಅಪರಾಧವಲ್ಲ, ಅದು ಕ್ರೌರ್ಯಕ್ಕೆ ಸಮಾನವಾಗಿದ್ದು, ಹೆಂಡತಿ ವಿಚ್ಛೇಧನಕ್ಕೆ ಅರ್ಹಳು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.