ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ, ಅವರ ಪತ್ನಿ ಮತ್ತು ನಟಿ ಜ್ಯೋತಿಕಾ ಮತ್ತು ಡಿಎಂಕೆ ಶಾಸಕ ಮತ್ತು ನಟ ಉದಯನಿಧಿ ಸ್ಟಾಲಿನ್ ಅವರಿಗೆ ಯುಎಸ್ ಗ್ಲೋಬಲ್ ಕಮ್ಯುನಿಟಿ ಆಸ್ಕರ್ ಪ್ರಶಸ್ತಿಗಳು ಒಲಿದಿದ್ದು, ಈ ಕುರಿತು ಅಮೆರಿಕದ ಸಂಸದ ಡ್ಯಾನಿ ಕೆ ಡೇವಿಸ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ, 'ಮೆಟ್ಎಫ್ (MEATF) ಕಾಂಗ್ರೆಷನಲ್ ಮೆಡಲ್ ಆಫ್ ಎಕ್ಸಲೆನ್ಸ್-2021' ಪ್ರಶಸ್ತಿಯನ್ನು 2021ರಲ್ಲಿ ಬಿಡುಗಡೆಯಾದ ಪೊಲೀಸ್ ದೌರ್ಜನ್ಯದ ಕುರಿತಾಗಿರುವ, ಸಾಮಾಜಿಕ ನ್ಯಾಯದ ಮೇಲಿನ ನೈಜ ಕಥೆಯನ್ನು ಆಧರಿಸಿದ ಭಾರತೀಯ ಚಲನಚಿತ್ರವಾದ 'ಜೈ ಭೀಮ್' ತಂಡಕ್ಕೆ ನೀಡಲಾಗುತ್ತದೆ ಎಂದಿದ್ದಾರೆ.
ಚಿತ್ರದ ಕಥೆಗೆ ಸ್ಫೂರ್ತಿಯಾಗಿರುವ ಜಸ್ಟೀಸ್ ಕೆ.ಚಂದ್ರು, ನಿರ್ಮಾಪಕರಾದ ಸೂರ್ಯ ಮತ್ತು ಜ್ಯೋತಿಕಾ, ಮತ್ತು ನಿರ್ದೇಶಕ ಟಿ.ಜೆ ಘಾನವೇಲ್ ಸೇರಿದಂತೆ ಜೈ ಭೀಮ್ ಅವರ ಇಡೀ ತಂಡ ಇಲಿನಾಯ್ಸ್‌ಗೆ ತೆರಳಲಿದ್ದು, ಫೆಬ್ರವರಿ 19ರಂದು ನಡೆಯಲಿರುವ 11ನೇ ಕಾಂಗ್ರೆಷನಲ್ ಗ್ಲೋಬಲ್ ಕಮ್ಯುನಿಟಿ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇದರ ಜೊತೆಗೆ ತಮಿಳುನಾಡಿನ ಡಿಎಂಕೆ ಶಾಸಕ ಮತ್ತು ನಟ ಉದಯನಿಧಿ ಸ್ಟಾಲಿನ್ ಅವರಿಗೆ 'ಇಂಟರ್ನ್ಯಾಷನಲ್ ರೈಸಿಂಗ್ ಸ್ಟಾರ್ ಆಫ್ ದ ಇಯರ್ 2021' ಪ್ರಶಸ್ತಿ ನೀಡಲಾಗಿದ್ದು, ಇವರೂ ಕೂಡಾ ಫೆಬ್ರವರಿ 19ರಂದು ಇಲಿನಾಯ್ಸ್‌ಗೆ ತೆರಳಿ ಪ್ರಶಸ್ತಿ ಪಡೆಯಲಿದ್ದಾರೆ.
ಇದನ್ನೂ ಓದಿ:ಹಿಂದಿ ಬಿಗ್ ಬಾಸ್ 15: ಟಾಸ್ಕ್ನಿಂದ ಹಿಂದೆ ಸರಿದ ತೇಜಸ್ವಿ ಪ್ರಕಾಶ್ ?