ಸುದೀಪ್
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪುಟ್ಟೇನಹಳ್ಳಿಯಲ್ಲಿ ನಟ ಸುದೀಪ್ ಮತ ಚಲಾಯಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 'ಮತದಾನಕ್ಕೆ ಬನ್ನಿ ಎಂದು ಬುದ್ಧಿ ಹೇಳುವ ವಿಚಾರ ಅಲ್ಲ ಇದು. ಪ್ರತಿಯೊಬ್ಬರಿಗೂ ಅವರ ಜವಾಬ್ದಾರಿ ಅರ್ಥವಾಗಬೇಕು. ಹಾಗಿದ್ದೂ ಮನೆಯಲ್ಲಿ ಕುಳಿತಿದ್ದರೆ ಅಲ್ಲೇ ಕುಳಿತಿರಲಿ, ನಮ್ಮ ಕರ್ತವ್ಯ ನಾವು ನಿಭಾಯಿಸಬೇಕು, ಚುನಾವಣಾ ಪ್ರಚಾರಕ್ಕೆ ಹೋಗಲ್ಲ ಎಂದು ಎರಡು ವರ್ಷದ ಹಿಂದೆ ಹೇಳಿದ್ದೆ. ಪ್ರೀತಿ ವಿಶ್ವಾಸದ ಮೇಲೆ ಪ್ರಚಾರಕ್ಕೆ ಹೋಗ್ತೀವಿ. ಜನ ನಮ್ಮ ಮೇಲಿನ ಪ್ರೀತಿಯಿಂದ ಮತ ಹಾಕ್ತಾರೆ. ಬಳಿಕ ಅಭ್ಯರ್ಥಿ ಕೆಲಸ ಮಾಡದಿದ್ದರೆ ಅದಕ್ಕೆ ನಾವು ಹೊಣೆ ಆಗಬೇಕಾಗುತ್ತದೆ. ಹಾಗಂತ ಅಭ್ಯರ್ಥಿಗೆ ನಮ್ಮ ಬೆಂಬಲ ಇಲ್ಲ ಎಂದಲ್ಲ. ಬೆಂಬಲ ಇದ್ದೇ ಇದೆ. ಅದು ಅವರಿಗೂ ಗೊತ್ತು ಎಂದು ಹೇಳಿದರು.
ಜಗ್ಗೇಶ್
ಮಲ್ಲೇಶ್ವರಂ ಎಂಇಎಸ್ ಕಾಲೇಜಿನಲ್ಲಿ ಇತರ ನಾಗರಿಕರೊಂದಿಗೆ ಜಗ್ಗೇಶ್ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಗ್ಗೇಶ್, ಮತದಾನ ಸಂವಿಧಾನ ಕೊಟ್ಟಿರುವ ಹಕ್ಕು. ನಮಗಾಗಿ ಅಲ್ಲದಿದ್ದರೂ ದೇಶಕ್ಕಾಗಿ ಮತ ಹಾಕಬೇಕು. ಸ್ವಲ್ಪ ತಾಳ್ಮೆಯಿಂದ ಕಾದು ಮತದಾನ ಮಾಡಬೇಕು. ಕೆಲವರು ಸಾಲಿನಲ್ಲಿ ನಿಲ್ಲಲಾಗದೆ ಮತ ಹಾಕದೆ ಹೊರಟುಹೋದರು. ಆದರೆ ಆಟೋ ಚಾಲಕರು ಬಂದು ಸಾಲಿನಲ್ಲಿ ನಿಂತು ಮತ ಚಲಾಯಿಸಿ ಹೋದರು. ಕಡ್ಡಾಯ ಮತದಾನ ಎಂಬ ಕಾನೂನು ತರಬೇಕು. ಯಾರಿಗಾದರೂ ನೀವು ವೋಟು ಚಲಾಯಿಸಿ. ಆದರೆ ತಪ್ಪದೆ ಮತ ಚಲಾಯಿಸಿ ಎಂದರು.