ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಮದಗಜ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಎಲ್ಲ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಕೆ.ಜಿ ರಸ್ತೆಯಲ್ಲಿರೋ ಅನುಪಮ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿರುವ ಮದಗಜ ಸಿನಿಮಾವನ್ನ, ನಟ ಶ್ರೀಮುರಳಿ, ನಟಿ ಆಶಿಕಾ ರಂಗನಾಥ್, ಖಳ ನಟ ಗರುಡ ರಾಮ್, ಹಾಸ್ಯ ನಟ ಶಿವರಾಜ್ ಕೆ ಆರ್ ಪೇಟೆ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮೊದಲ ಶೋ ನೋಡಿದ್ದಾರೆ. ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ಮದಗಜ ಚಿತ್ರತಂಡ, ಸಿನಿಮಾ ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಸಖತ್ ಖುಷಿಯಾದರು.
ಗಜೇಂದ್ರಗಡ ಹಾಗೂ ಶಿವಗಡ ಎಂಬ ಹಳ್ಳಿಗಳ ಮಧ್ಯೆ ನದಿಯೊಂದು ಹರಿಯುತ್ತಿರುತ್ತದೆ. ಈ ನದಿಯ ನೀರನ್ನು ಶಿವಗಡದವರಿಗೆ ಬಿಡದೆ, ಗಜೇಂದ್ರಗಡ ಜನರಿಗೆ ಅನ್ಯಾಯ ಮಾಡುತ್ತಿರುತ್ತಾರೆ. ಶಿವಗಡದ ಭೈರವನಾಗಿ ಆ ಜನರ ಕಷ್ಟಕ್ಕೆ ಸ್ಪಂದಿಸುವನೇ ಜಗಪತಿ ಬಾಬು. ಆ ಊರಿನ ಜನರ ಭೂಮಿ ಹಾಗೂ ನೀರಿಗಾಗಿ ಮಗ ಸೂರ್ಯನನ್ನ(ಶ್ರೀಮುರಳಿ) ದೂರ ಮಾಡಿಕೊಂಡಿರುತ್ತಾರೆ.
ಅಷ್ಟಕ್ಕೂ ಭೈರವನ ಮಗ ಸೂರ್ಯ ವಾರಾಣಸಿಗೆ ಹೇಗೆ ಹೋಗ್ತಾನೆ? ಎರಡೂ ಊರಿನ ದ್ವೇಷ ಕಡಿಮೆ ಆಗೋದು ಹೇಗೆ? ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೇವಯಾನಿ ಮತ್ತು ಊರನ್ನು ನಾಯಕ ನಟ ಶ್ರೀಮುರಳಿ ಹೇಗೆ ಉಳಿಸಿಕೊಳ್ಳುತ್ತಾರೆ ಅನ್ನೋದೇ ಮದಗಜ ಸಿನಿಮಾದ ಕಥೆ. ಶ್ರೀಮುರಳಿ ಮಾಸ್ ಅವತಾರ ಹಾಗೂ ಆ್ಯಕ್ಷನ್ ಸನ್ನಿವೇಶಗಳಲ್ಲಿ ಅಬ್ಬರಿಸಿರೋದು ಅವ್ರ ಅಭಿಮಾನಿಗಳಿಗೆ ಇಷ್ಟ ಆಗುತ್ತೆ. ಶ್ರೀಮುರಳಿ ಜೋಡಿಯಾಗಿ, ಚಿತ್ರದಲ್ಲಿ ಆಶಿಕಾ ರಂಗನಾಥ್ ಪಕ್ಕಾ ಹಳ್ಳಿ ಹುಡುಗಿಯಾಗಿ ಗಮನ ಸೆಳೆಯುತ್ತಾರೆ.