ದೇಶದೆಲ್ಲೆಡೆ ಕೊರೊನಾ 2ನೇ ಅಲೆಯ ಭೀಕರತೆಗೆ ಬಡವರು, ಶ್ರೀಮಂತರು, ಗಣ್ಯರು ಎನ್ನದೇ ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆ, ಬೆಡ್, ಆಕ್ಸಿಜನ್ ಸಿಗದೇ ಪರದಾಡುತ್ತಿದ್ದಾರೆ. ಇಂತಹ ಹೀನಾಯ ಸ್ಥಿತಿಯನ್ನು ಕಂಡು ಮರುಗುತ್ತಿರುವ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಕೈಲಾದ ಸಾಹಯವನ್ನು ಮಾಡಿ ನೆರವಾಗಿದ್ದಾರೆ. ಇಂತಹದ್ದೇ ಸಾಕಷ್ಟು ಜನಪರ ಕಾರ್ಯ ಮಾಡಿ ಹೆಸರು ವಾಸಿಯಾಗಿರುವ ಬಾಲಿವುಡ್ ನಟ ಸೋನುಸೂದ್, ಈಗ ಬೆಂಗಳೂರು ಜನತೆಯ ಸಹಾಯಕ್ಕೆ ಮುಂದೆ ಬಂದಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಯಲಹಂಕದ ಅರ್ಕ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡಿ, ಕೆಲ ಜನರ ಪ್ರಾಣವನ್ನ ಉಳಿಸಿದ್ದ ನಟ ಸೋನು ಸೂದ್, ಈಗ ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರಿನ ಸಾಕಷ್ಟು ಆಸ್ಪತ್ರೆಗಳಲ್ಲಿರುವ ಆಮ್ಲಜನಕದ ಕೊರತೆ, ಬೆಡ್ಗಳ ಅಲಭ್ಯತೆಯ ನಿವಾರಣೆ ಸೇರಿದಂತೆ ಮನೆ ಬಾಗಿಲಿಗೆ ವೈದ್ಯಕೀಯ ಆಮ್ಲಜನಕ ಸಿಲಿಂಡರ್ಗಳನ್ನು ಪೂರೈಕೆ ಮಾಡಲು ನಿರ್ಧರಿಸಿದ್ದಾರೆ.