ಕಳೆದ ಕೆಲ ದಿನಗಳಿಂದ ಬೆಂಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗುತ್ತಿದೆ. ಎಡಬಿಡದೆ ಭೂಮಿಗೆ ಬೀಳುತ್ತಿರುವ ವರ್ಷಧಾರೆ ಬೆಳಗಾವಿ, ಚಿಕ್ಕೋಡಿ,ರಾಯಚೂರು, ಯಾದಗಿರಿ, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಮಳೆರಾಯನ ಅವಾಂತರಕ್ಕೆ ತುತ್ತಾಗಿರುವ ಇಲ್ಲಿಯ ಜನತೆ ಅಕ್ಷರಶಃ ನೀರಿನ ಮೇಲೆ ಜೀವನ ಸಾಗಿಸುವಂತಾಗಿದೆ.
ಎಡಬಿಡದ ಮಳೆಗೆ ಉತ್ತರ ಕರ್ನಾಟಕ ತತ್ತರ...ನೆರವಿಗೆ ಧಾವಿಸಿದ ಮೊದಲ ನಟ ಶರಣ್ - ಕನ್ನಡ ಚಿತ್ರರಂಗದ ನಟ ಶರಣ್
ಭಯಂಕರ ಮಳೆಯಿಂದ ತತ್ತರಿಸುತ್ತಿರುವ ಉತ್ತರ ಕರ್ನಾಟಕದ ನೆರವಿಗೆ ಕನ್ನಡ ಚಿತ್ರರಂಗದ ನಟ ಶರಣ್ ಮುಂದಾಗಿದ್ದಾರೆ.
![ಎಡಬಿಡದ ಮಳೆಗೆ ಉತ್ತರ ಕರ್ನಾಟಕ ತತ್ತರ...ನೆರವಿಗೆ ಧಾವಿಸಿದ ಮೊದಲ ನಟ ಶರಣ್](https://etvbharatimages.akamaized.net/etvbharat/prod-images/768-512-4069491-thumbnail-3x2-sharan.jpg)
ಮೇಘರಾಜನ ರೌದ್ರ ನರ್ತನದಿಂದ ಈಗಾಗಲೇ ಅಪಾರ ಪ್ರಮಾಣ ಮನೆ-ಮಠ, ಬೆಳೆ ಕಳೆದುಕೊಂಡಿರುವ ಉತ್ತರ ಕರ್ನಾಟಕದ ಜನಕ್ಕೆ ನೆರವಿನ ಅಗತ್ಯ ಇದೆ. ಇದನ್ನು ಮನಗಂಡಿರುವ ನಟ ಶರಣ್, ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಕರೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಜನರ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಿ ನಿಲ್ಲೋಣ ಎಂದು ಕರೆ ಕೊಟ್ಟಿದ್ದಾರೆ.
ಇನ್ನು ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಕೊಡಗು ಜಿಲ್ಲೆ ನೆರವಿಗೆ ಉತ್ತರ ಕರ್ನಾಟಕದ ಜನತೆ ಟೊಂಕ ಕಟ್ಟಿ ನಿಂತಿತ್ತು. ಅಲ್ಲಿಯ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಟ್ರಕ್ಗಳಲ್ಲಿ ಕಳುಹಿಸಿಕೊಟ್ಟಿತ್ತು. ಆದರೆ. ಈ ಬಾರಿ ಉತ್ತರ ಕರ್ನಾಟಕದವರು ಸಂಕಷ್ಟದಲ್ಲಿದ್ದಾರೆ. ಇವರ ನೆರವಿಗೆ ಯಾರೂ ಮುಂದಾಗುತ್ತಿಲ್ಲ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲೇ ಶರಣ್ ಅವರು ಉತ್ತರ ಕರ್ನಾಟಕದ ಸಮಸ್ಯೆಗೆ ಧ್ವನಿಗೂಡಿಸಿ ಅಭಿನಂದನೆಗೆ ಅರ್ಹರಾಗಿದ್ದಾರೆ.