ಕನ್ನಡ ಚಿತ್ರರಂಗದ ಪ್ರಸಿದ್ಧ ಹಿರಿಯ ನಟ ಹಾಗೂ ಪಾಪಾ ಪಾಂಡು ಸೀರಿಯಲ್ ಖ್ಯಾತಿಯ ಶಂಕರ್ ರಾವ್ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್, ಇಂದು ಬೆಳಗಿನ ಜಾವ 6.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ಶಂಕರ್ ರಾವ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿ ತೆರೆ ಮೇಲೆ ತನ್ನದೇ ಚಾಪು ಮೂಡಿಸಿದ್ದ ಶಂಕರ್ ರಾವ್ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಮಾತ್ರ ಚಾಲೆಂಜಿಂಗ್. ಮೂಲತಃ ತುಮಕೂರಿನವರಾದ ಶಂಕರ್ ರಾವ್, ಬಾಲ್ಯದ ಹಾಗೂ ಕಾಲೇಜು ದಿನಗಳನ್ನ ತುಮಕೂರಿನಲ್ಲೇ ಕಳೆದವರು.
ಶಾಲಾ ದಿನಗಳಿಂದಲೇ ನಾಟಕ ಮಾಡುತ್ತಿದ್ದ ಕಲಾವಿದ :ಶಾಲಾ ದಿನಗಳಿಂದಲೇ ಶಂಕರ್ ರಾವ್ ಏಕಾಪಾತ್ರ ಅಭಿನಯ, ನಾಟಕಗಳನ್ನ ಮಾಡುತ್ತಿದ್ದರು. ಶಂಕರ್ ರಾವ್ ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡೋದಕ್ಕೆ ಕಾರಣ, ಚಿಕ್ಕ ವಯಸ್ಸಿನಿಂದಲೇ ಇದ್ದ ಸಿನಿಮಾ ನೋಡುವ ಗೀಳು. ಹೆಚ್ಚಾಗಿ ಚಿತ್ರಮಂದಿರಗಳಲ್ಲಿ ತೆಲುಗು ಸಿನಿಮಾಗಳನ್ನ ನೋಡುತ್ತಿದ್ದ ಶಂಕರ್ ರಾವ್, ಸಿನಿಮಾ ನಟನಾಗುವಂತೆ ಅವು ಪ್ರೇರೇಪಿಸಿದ್ದವಂತೆ.
'ಗೆಳೆಯರ ಬಳಗ'ದಿಂದ ನಾಟಕ ಪ್ರದರ್ಶನ :ಹೀಗಾಗಿ, 1956ರಲ್ಲಿ ಶಂಕರ್ ರಾವ್ ಬೆಂಗಳೂರಿಗೆ ಬರುತ್ತಾರೆ. ಆಗ ಗೆಳೆಯರ ಬಳಗ ಟೀಮ್ ಕಟ್ಟಿಕೊಂಡು ಶಂಕರ್ ರಾವ್ ನಾಟಕಗಳನ್ನ ಮಾಡಲು ಶುರು ಮಾಡುತ್ತಾರೆ. ನಟರಂಗ ಎಂಬ ತಂಡದ ಜೊತೆಗೂ ಶಂಕರ್ ರಾವ್ ಗುರುತಿಸಿಕೊಳ್ಳುತ್ತಾರೆ.
'ಯಾರ ಸಾಕ್ಷಿ' ಸಿನಿಮಾ ಮೂಲಕ ಪದಾರ್ಪಣೆ :ಶಂಕರ್ ರಾವ್ ನಾಟಕಗಳನ್ನ ಮಾಡುತ್ತಾ ದಿವಂಗತ ಸಿ ಆರ್ ಸಿಂಹ ನಿರ್ದೇಶನದ ನಾಟಕಗಳಲ್ಲಿ ನಟಿಸಿ ಗಮನ ಸೆಳೆಯುತ್ತಾರೆ. ಹೀಗೆ ನಾಟಕಗಳನ್ನ ಮಾಡಬೇಕಾದರೆ, ಶಂಕರ್ ರಾವ್ ನಟನೆ ನೋಡಿ, ಸಿನಿಮಾ ನಿರ್ಮಾಪಕರೊಬ್ಬರು, ಸಿನಿಮಾದಲ್ಲಿ ಅಭಿನಯಕ್ಕೆ ಅವಕಾಶ ನೀಡಿದರು. ಅದುವೇ 'ಯಾರ ಸಾಕ್ಷಿ' ಸಿನಿಮಾ. ಈ ಚಿತ್ರದ ಮೂಲಕ ಶಂಕರ್ ರಾವ್ ಸಿನಿಮಾ ಇಂಡಸ್ಟ್ರಿಗೆ ಬರುವ ಮೂಲಕ, ತಮ್ಮ ಬಾಲ್ಯದ ಕನಸನ್ನ ನನಸು ಮಾಡಿಕೊಳ್ಳುತ್ತಾರೆ.
ಕನ್ನಡ ಚಿತ್ರರಂಗದ ಬೇಡಿಕೆಯ ಪೋಷಕ ನಟ :1972ರಲ್ಲಿ ಬಂದ ಯಾರ ಸಾಕ್ಷಿ ಸಿನಿಮಾದಲ್ಲಿ ಮಂಜುಳ ನಾಯಾಕಿಯಾಗಿ ಅಭಿನಯಿಸಿದರು. ಲೋಕನಾಥ್ ಜೊತೆಗೆ ಶಂಕರ್ ರಾವ್ ಕೂಡ ಈ ಚಿತ್ರದಲ್ಲಿ ನಟಿಸಿರುತ್ತಾರೆ. ನಿರ್ದೇಶಕ ಎಂ.ಆರ್.ವಿಠ್ಠಲ್ ನಿರ್ದೇಶನ ಮಾಡಿರುತ್ತಾರೆ.