ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಮ್ಮನೆಲ್ಲ ಅಗಲಿ ಒಂದು ವಾರ ಕಳೆಯುತ್ತಿದೆ. ಆದರೆ, ಸಂಚಾರಿ ವಿಜಯ್ ಹೆಸರು ಬಳಸಿಕೊಂಡು, ಪ್ರಚಾರ ಪಡೆದವರ ಬಗ್ಗೆ ಸಂಚಾರಿ ವಿಜಯ್ ಆತ್ಮೀಯ ಗೆಳೆಯ ಹಾಗೂ ಸಂಭಾಷಣೆಕಾರ ವೀರೇಂದ್ರ ಮಲ್ಲಣ್ಣ ತಮ್ಮದೇ ಮಾತುಗಳಲ್ಲಿ ವಿವರಿಸಿದ್ದಾರೆ. ಸಂಚಾರಿ ವಿಜಯ್ ಅವರಿಗೆ ಇತ್ತೀಚೆಗೆ ಪರಿಚಯವಾದವರು, ಅವರ ಬಗ್ಗೆ ಹೆಚ್ಚೇನೂ ತಿಳಿಯದವರು, ಕೆಲ ತಿಂಗಳುಗಳಿಂದ ಅವರ ಜೊತೆ ಸಮಯ ಕಳೆದವರು, ವಿಜಯ್ ಅವರ ಬಗ್ಗೆ ಇನ್ನಿಲ್ಲದಂತೆ ಸುಳ್ಳು ಸುದ್ದಿ ಹಾಗೂ ಬಣ್ಣ-ಬಣ್ಣದ ತಪ್ಪು ಕಲ್ಪನೆಗಳನ್ನು ಹುಟ್ಟು ಹಾಕುತ್ತಿರುವ ಹಿನ್ನೆಲೆ ಸಂಚಾರಿ ವಿಜಯ್ ಅವರ ಕುರಿತಾಗಿ ಹೇಳಲೇಬೇಕಾದ ಕೆಲ ಮಾತುಗಳು ಈ ಲೇಖನದಲ್ಲಿದೆ.
2015ನೇ ಇಸವಿಯ ಆರಂಭದಲ್ಲಿ.. ಫೇಸ್ಬುಕ್-ವಾಟ್ಸ್ಆ್ಯಪ್ ದಾಟಿ, ವೈಯಕ್ತಿಕವಾಗಿ ನಿರ್ದೇಶಕ ಮಂಸೋರೆಯ ಮೂಲಕ ಸಂಚಾರಿ ವಿಜಯ್ ಅವರು ನನಗೆ ಗೆಳೆಯರಾದ ಹೊತ್ತು. ನಾನು ಅವನಲ್ಲ ಅವಳು ಮತ್ತು ಹರಿವು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿಗಳ ಗೌರವ ಸಿಕ್ಕಿತ್ತು. ವಿಜಯ್ ಅಭಿನಯದ “ನಾನು ಅವನಲ್ಲ ಅವಳು” ಮತ್ತು ಮಂಸೋರೆ ನಿರ್ದೇಶನದ “ಹರಿವು” ಸಿನಿಮಾಗಳನ್ನು ನಾನು ನೋಡಿರಲಿಲ್ಲ. ಆ ದಿನಗಳಲ್ಲಿ ನನಗೆ ಫೆಸ್ಟಿವಲ್-ಪ್ಯಾರಲಲ್ ಸಿನಿಮಾಗಳ ಮೇಲೆ ಆಸಕ್ತಿ ಇರಲಿಲ್ಲ. ಅವರಿಬ್ಬರೂ ಮೊದಲಿನಂದ ಒಂದೇ ತಟ್ಟೆಯಲ್ಲಿ ಚಿತ್ರಾನ್ನ ಹಂಚಿಕೊಂಡು ತಿನ್ನುತ್ತಿದ್ದ ಆಪ್ತ ಗೆಳೆಯರು, ನಾನು ಅವರಿಬ್ಬರಿಗೂ ಹೊಸ ಪರಿಚಯ. ಅವರಿಬ್ಬರೂ ನನ್ನ ಎದೆ ಮೇಲೆ ಕೂತು ಆ ಎರಡು ಸಿನಿಮಾ ನೋಡೆಂದರೂ ನಾನು ನೋಡಿರಲಿಲ್ಲ.
ಒಂದು ದಿನ ಸಂಚಾರಿ ವಿಜಯ್ ಬಲವಂತವಾಗಿ ಸವಿತ ಚಿತ್ರಮಂದಿರದೊಳಗೆ ನನ್ನನ್ನು ಎಳೆದೊಯ್ದು ಕೂರಿಸಿ ಸಿನಿಮಾ ತೋರಿಸಿದರು. "ಇಷ್ಟ ಆಗಲಿಲ್ಲ ಅಂದ್ರೂ ಸರಿ ನೋಡಲೇಬೇಕು, ಇದು ನಾನು ನಿಮಗೆ ಕೊಡುವ ಶಿಕ್ಷೆ ಅನ್ಕೊಂಡಾದ್ರೂ ನೋಡಲೇಬೇಕು ವೈರಸ್" ಎಂದು ಹೇಳಿದಾಗ ನನ್ನ ಕೊಬ್ಬು ಪಕ್ಕಕ್ಕಿಟ್ಟು ಸಿನಿಮಾ ನೋಡಿದೆ. ನಂತರ ಹರಿವು ಸಿನಿಮಾನೂ ನೋಡಿದೆ. ಎರಡೂ ವಿಭಿನ್ನ ಸಿನಿಮಾಗಳು, ಎರಡರಲ್ಲೂ ಸಂಚಾರಿ ಅವರದ್ದು ವಿಭಿನ್ನ ಪಾತ್ರಗಳು. ಹರಿವು ಸಿನಿಮಾದ ಶರಣಪ್ಪ ಎಂಬ ಅಪ್ಪನೆಲ್ಲಿ? ನಾನು ಅವನಲ್ಲ ಅವಳು ಸಿನಿಮಾದ ಮಾದೇಶನಿಂದ ಮಂಗಳಮುಖಿಯಾದ ವಿದ್ಯಾ ಎಲ್ಲಿ? ಎರಡು ವಿರುದ್ಧ ದಿಕ್ಕಿನ ಪಾತ್ರಗಳನ್ನು ಎಳ್ಳಷ್ಟೂ ಲೋಪವಿಲ್ಲದೆ ಜೀವಿಸಿದ ಸಂಚಾರಿ ವಿಜಯ್ ಎಂತಹ ದೈತ್ಯ ಎನ್ನಿಸಿಬಿಡ್ತು. ಆ ಮೂಲಕ ನನಗೆ ಫೆಸ್ಟಿವಲ್-ಪ್ಯಾರಲಲ್ ಸಿನಿಮಾಗಳ ಕಡೆಗೆ ಆಸಕ್ತಿ ಮೂಡಿಸಿದವರು ನಟ ಸಂಚಾರಿ ವಿಜಯ್ ಮತ್ತು ನಿರ್ದೇಶಕ ಮಂಸೋರೆ.
ಸಂಚಾರಿ ವಿಜಯ್ ಅಜಾಗರೂಕತೆಯಿಂದ ನಡೆದುಕೊಳ್ಳುವವರಾಗಿರಲಿಲ್ಲ, ಅವರಲ್ಲಿ ಬೇಜಾವಬ್ದಾರಿತನವೂ ಇರಲಿಲ್ಲ. ವಿಜಯ್ ಅವರು ಕಾರು ಮಾರಿಕೊಂಡರು, ಹೆಲ್ಮೆಟ್ ಹಾಕದೆ ಬೈಕಿನಲ್ಲಿ ಹೋದರು ಎಂಬ ಸುದ್ದಿಗೆ ಹೆಚ್ಚು ಒತ್ತು ಕೊಟ್ಟರು ಕೆಲವರು. ವಿಜಯ್ ಅವರ ಮನೆಯಲ್ಲಿ ಇದ್ದದ್ದು ಒಂದೇ ಕಾರ್ ಅಲ್ಲ..! ಆರ್ಥಿಕ ಸಮಸ್ಯೆಯ ಕಾರಣಕ್ಕೆ ಕಾರು ಮಾರಾಟ ಮಾಡಿದರು ಎಂಬುದು ಸುಳ್ಳು. ವಿಜಯ್ ಅವರಿಗೆ ಆರ್ಥಿಕ ಸಮಸ್ಯೆಗಳು ಇರಲಿಲ್ಲ, ಆ ಕಾರಣಕ್ಕೆ ಅವರು ಮದುವೆ ಆಗದೆ ಉಳಿದಿದ್ದರು ಎಂದು ಯಾರೋ ಒಬ್ಬರು ಕೊಟ್ಟ ಹೇಳಿಕೆ ಸುಳ್ಳು. ಮದುವೆ ಯಾಕಾಗಿಲ್ಲ ಎಂದು ಕೇಳಿದವರಿಗೆ ತಮಾಷೆಯಾಗಿ ನೀಡಿದ ಹಾರಿಕೆಯ ಉತ್ತರಗಳನ್ನು ಗಂಭೀರವಾಗಿ ಪರಿಗಣಿಸಬಾರದಿತ್ತು. ಮದುವೆ ಎಂಬುದು ಅವರ ವೈಯಕ್ತಿಕ ವಿಚಾರವಾಗಿತ್ತು. ಅವರಿಗೆ ಮನೆ ಬಾಡಿಗೆ ಕಟ್ಟಲು ಆಗುತ್ತಿರಲಿಲ್ಲ ಎಂಬ ಹೇಳಿಕೆಯೂ ಸುಳ್ಳು, ವಿಜಯ್ ಅವರದ್ದು ಸ್ವಂತ ಮನೆ. ಸಹೋದರನ ಜೊತೆ ಸೇರಿ ಕಟ್ಟಿಕೊಂಡ ಮೂರಂತಸ್ತಿನ ಮನೆ ಅವರದ್ದು. ವಿಜಯ್ ಅವರ ಬಗ್ಗೆ ಮಾತನಾಡುವ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿರುವವರಿಗೆ ನಿಜವಾದ ಸಂಚಾರಿ ವಿಜಯ್ ಪರಿಚಯವೇ ಇಲ್ಲ. ಸಂಚಾರಿ ವಿಜಯ್ ಬಡವರಾಗಿರಲಿಲ್ಲ. ನಾವು ಕಂಡ ಶ್ರೀಮಂತ ಅವರು, ಹೃದಯ ಶ್ರೀಮಂತ.
ಅಪರೂಪಕ್ಕೆ ಅಥವಾ ಅಕಸ್ಮಾತ್ತಾಗಿ ವಿಜಯ್ ಅವರು ನಮ್ಮ ಜೊತೆ ಬೈಕ್ನಲ್ಲಿ ಓಡಾಡಬೇಕಾದ ಸಂದರ್ಭ ಬಂದಾಗ ಹೆಲ್ಮೆಟ್ ಹಾಕದೆ ಬೈಕ್ ಹತ್ತಿ ಕೂತದ್ದು ಎಂದೂ ಕಂಡಿಲ್ಲ. ಯಾವುದಾದರೂ ಕೆಲಸಕ್ಕೆ ತುರ್ತಾಗಿ ಹೋಗಬೇಕಾಗಿ ಬಂದಾಗ ನಮ್ಮ ಬೈಕುಗಳನ್ನು ತೆಗೆದುಕೊಂಡು ಹೋಗುವಾಗಲೂ ಹೆಲ್ಮೆಟ್ ಹಾಕದೇ ಹೋಗುತ್ತಿದ್ದವರಲ್ಲ. ಮೊದಲನೆಯದಾಗಿ ಅವರು ಕಾರಲ್ಲೇ ಓಡಾಡುತ್ತಿದ್ದ ವ್ಯಕ್ತಿ. ಈ ಟ್ರಾಫಿಕ್ಕಿನಲ್ಲಿ ಕಾರು ಡ್ರೈವ್ ಮಾಡಲು ಹಿಂಸೆ ಅನ್ನಿಸಿದಾಗ ಎಷ್ಟೋ ಬಾರಿ ಆಟೋ, ಕ್ಯಾಬ್, ಮೆಟ್ರೋ ರೈಲಿನಲ್ಲಿ ಓಡಾಡಿದವರು. ವಿಜಯ್ ಅತಿ ವೇಗಕ್ಕೆ ಹೆದರುತ್ತಿದ್ದವರು. ಈ ಬಾರಿಯ ಲಾಕ್ಡೌನ್ ಶುರುವಾಗುವ ಮುನ್ನ ನಾವು ಹೈದರಾಬಾದ್ನಲ್ಲಿ ಇದ್ವಿ. ವಾಪಸ್ ಕಾರಿನಲ್ಲಿ ಬರುವಾಗ ಬೆಂಗಳೂರಿನಲ್ಲಿ ರಾತ್ರಿ ಒಂಭತ್ತು ಗಂಟೆಯಿಂದ ಕರ್ಫ್ಯೂ ಶುರುವಾಗುತ್ತದೆ ಎಂಬ ಸುದ್ದಿ ತಿಳಿದು ನಮ್ಮ ಕಾರನ್ನು ವೇಗವಾಗಿ ಓಡಿಸಲೇಬೇಕಾಯ್ತು. ಆಗ ವಿಜಯ್ "ಪರ್ವಾಗಿಲ್ಲ ನಿಧಾನಕ್ಕೇ ಹೋಗಿ, ಲೇಟ್ ಆದ್ರೂ ಸರಿ, ಪೊಲೀಸರ ಜೊತೆ ಮಾತನಾಡೋಣ.." ಎಂದು ಕಾರಿನ ವೇಗ ಕಡಿಮೆ ಮಾಡಿಸಿದ್ದವರು. ಕಳೆದ ವರ್ಷದ ಅಂತ್ಯದಲ್ಲಿ ನಾವೆಲ್ಲಾ ಗೋವಾಗೆ ಹೋಗಿ ಬರುವ ಪ್ರಯಾಣದುದ್ದಕ್ಕೂ ಹಿಂದಿನ ಸೀಟಲ್ಲೂ ಸೀಟ್ ಬೆಲ್ಟ್ ಹಾಕಿ ಕುಂತಿದ್ದವರು. ಅವರ ಮನೆಯ ಪಕ್ಕದ ರಸ್ತೆಯ ಅಂಗಡಿಗೆ ಹೋಗುವಾಗಲೂ ಕಾರಿನಲ್ಲೇ ಹೋಗಿ ಬರುತ್ತಿದ್ದ ಸಂಚಾರಿ ವಿಜಯ್ ಅವರು ಅಕಸ್ಮಾತ್ತಾಗಿ ಹೆಲ್ಮೆಟ್ ಇಲ್ಲದೆ ಬೈಕ್ ಹತ್ತಿದ್ದೇ ಶಾಪವಾಯಿತೋ ಏನೋ..!!?
ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಮೂವರು ಸಹೋದರರೊಳಗೊಬ್ಬ ಹದಿನೈದು ವಯಸ್ಸಿನ ಹುಡುಗ ವಿಜಯ್ ಕುಮಾರ್ ಬಿ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಆಗುವ ತನಕ ಸಾಗಿ ಬಂದ ದಾರಿ ಅಂತಿಂತದ್ದಲ್ಲ. ಹಳ್ಳಿಯಲ್ಲಿ ಓದಿ, ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಿ, ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯ ಓದಿಕೊಂಡು, ಸೈನ್ ಬೋರ್ಡ್ ಆರ್ಟಿಸ್ಟ್ ಆಗಿ, ಹಿಂದೂಸ್ತಾನಿ ಮತ್ತು ಕರ್ನಾಟಿಕ್ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ, ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡಿಕೊಂಡು, ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ ರಂಗಭೂಮಿಯಲ್ಲಿ ದುಡಿದು, ತನ್ನ ಸಹೋದರನನ್ನು ಓದಿಸಿಕೊಂಡು, ನಟನೆಯಲ್ಲಿ ಪಕ್ವವಾಗಿ, ಧಾರವಾಹಿ ಮತ್ತು ಸಿನಿಮಾಗಳಲ್ಲಿ ತೊಡಗಿಸಿಕೊಂಡು, ರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರವಾದ ದಣಿವರಿಯದ ಸಂಚಾರಿ ವಿಜಯ್ ಕನ್ನಡ ಚಿತ್ರರಂಗವಲ್ಲದೇ ಬೇರಾವುದೇ ಚಿತ್ರರಂಗದವರಾಗಿದ್ದಿದ್ದರೆ ಅಲ್ಲಿನ ಉದ್ಯಮಗಳು ಅವರನ್ನು ಇನ್ನೂ ಉತ್ತಮ ಮಟ್ಟದಲ್ಲಿ ದುಡಿಸಿಕೊಳ್ಳುತ್ತಿದ್ದವೇನೋ..!? ಅಪ್ಪನ ಪಾತ್ರವಾಗಲಿ, ಮಗನ ಪಾತ್ರವಾಗಲಿ, ಯುವಕನ ಪಾತ್ರವಾಗಲಿ, ಮಧ್ಯವಯಸ್ಕನ ಪಾತ್ರವಾಗಲಿ, ವೃದ್ಧನ ಪಾತ್ರವಾಗಲಿ, ಹೆಣ್ಣಿನ ಪಾತ್ರವಾಗಲಿ, ಅಂಗವಿಕಲನ ಪಾತ್ರವಾಗಲಿ, ಮಾನಸಿಕ ಅಸ್ವಸ್ಥನ ಪಾತ್ರವಾಗಲಿ, ಗಂಭೀರ ಪಾತ್ರವಾಗಲಿ, ಹಾಸ್ಯಪಾತ್ರವಾಗಲಿ, ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಪ್ರತಿಭೆ ಸಂಚಾರಿ ವಿಜಯ್. ಅಂತಹ ಸಂಚಾರಿ ವಿಜಯ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ದುಡಿಸಿಕೊಂಡದ್ದು ಅವರ ಪರಿಚಿತರು, ಆಪ್ತರು ಮತ್ತು ಗೆಳೆಯರು ಮಾತ್ರ.