ಬೆಂಗಳೂರು:ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ವಿ.ರವಿಚಂದ್ರನ್ ಅವರ ತಾಯಿ ಪಟ್ಟಮ್ಮಲ್ ವೀರಸ್ವಾಮಿ ಇಂದು ಬೆಳಿಗ್ಗೆ 6.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಪಟ್ಟಮ್ಮಲ್ ಅವರಿಗೆ 83 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ. ಇಂದು ಸಂಜೆಯೊಳಗೆ ಅಂತ್ಯಸಂಸ್ಕಾರ ನೆರವೇರಿಸುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ.
ರವಿಚಂದ್ರನ್, ಬಾಲಾಜಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಪಟ್ಟಮ್ಮಲ್ ವೀರಸ್ವಾಮಿ ಅಗಲಿದ್ದಾರೆ.
ನಟ ರವಿಚಂದ್ರನ್ ತಾಯಿ ನಿಧನ: ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಳೆದ ನಾಲ್ಕೈದು ವರ್ಷಗಳಿಂದ ಪಟ್ಟಮ್ಮಲ್ ಅವರು ಮಾತನಾಡುತ್ತಿರಲಿಲ್ವಂತೆ. ಆದರೆ ಮಗ ರವಿಚಂದ್ರನ್ ಧ್ವನಿಯನ್ನು ಮಾತ್ರ ಅವರು ಕಂಡು ಹಿಡಿಯುತ್ತಿದ್ದರು. ನನ್ನ ಗೆಲುವನ್ನು ಮತ್ತೊಮ್ಮೆ ನೋಡಿಯೇ ನನ್ನಮ್ಮ ಅಗಲೋದು ಅಂತ ಆಗಾಗ ರವಿಚಂದ್ರನ್ ಹೇಳುತ್ತಿದ್ದರು.
ಅಂತಿಮ ದರ್ಶನ:ರಾಜಾಜಿನಗರದಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಪಟ್ಟಮ್ಮಾಳ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸದ್ಯ ಆಸ್ಪತ್ರೆಯಿಂದ ಅವರ ಪಾರ್ಥಿವ ಶರೀರವನ್ನ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಸಂಜೆ 5 ರವರೆಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಚಿತ್ರರಂಗದವರು ಹಾಗೂ ಸಂಬಂಧಿಕರು ಅಂತಿಮ ದರ್ಶನ ಪಡೆಯಲಿದ್ದಾರೆ. ಸಂಜೆಯೊಳಗೆ ಗಾಯತ್ರಿ ನಗರದಲ್ಲಿರುವ ಹರಿಶ್ಚಂದ್ರ ಚಿತಾಗಾರದಲ್ಲಿ ಪಟ್ಟಮ್ಮಾಳ್ ಅವರ ಅಂತ್ಯಕ್ರಿಯೆ ಮಾಡಲು ಕುಟುಂಬ ವರ್ಗ ನಿರ್ಧರಿಸಿದೆ.
ತಾಯಿ ಜೊತೆಗಿನ ರವಿಚಂದ್ರನ್ ಫೋಟೋ