ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಮತ್ತು ಲಹರಿ ಮ್ಯೂಸಿಕ್ ಸಂಸ್ಥೆ ಮಾಲೀಕ ವೇಲು ನಡುವೆ ಚಿತ್ರದ ಹಾಡಿನ ವಿಚಾರವಾಗಿ ಈ ಮೊದಲು ಮನಸ್ತಾಪ ಉಂಟಾಗಿತ್ತು. ಇದೀಗ ಮುನಿಸು ಮರೆತು ಈ ಇಬ್ಬರು ಒಂದಾಗಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದ್ದ ಹಾಡು ಲಹರಿ ಸಂಸ್ಥೆಯದ್ದು ಎಂದು ಕೃತಿಚೌರ್ಯದ ಆರೋಪ ಹೊರಿಸಿ ವೇಲು ಕೋರ್ಟ್ ಮೆಚ್ಚಿಲೇರಿದ್ದರು. ಬಳಿಕ ಈ ಪ್ರಕರಣ ಸಂಬಂಧ ಹಲವು ಬಾರಿ ವಿಚಾರಣೆ ಸಹ ನಡೆದಿತ್ತು. ಲಹರಿ ವೇಲು ಮತ್ತು ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿಯೇ ಆರೋಪ ಮತ್ತು ಪ್ರತ್ಯಾರೋಪ ಮಾಡಿದ್ದರು. ಆದರೆ ಈಗ ಅಚ್ಚರಿ ಎಂಬಂತೆ ಇಬ್ಬರೂ ಒಂದಾಗಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಲಹರಿ ಸಂಸ್ಥೆ ಮಾಲೀಕ ಲಹರಿ ವೇಲು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮುನಿಸು ಮರೆತಿದ್ದಾರೆ.
ತಮ್ಮ ನಡುವಿನ ಎಲ್ಲ ಕಿರಿಕ್ಗಳನ್ನು ಬದಿಗಿಟ್ಟು ಸ್ನೇಹದ ಹಸ್ತ ಚಾಚಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಮೂವರು ಹೊಸ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದಿಷ್ಟೇ ಅಲ್ಲ, ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಘಟನೆ, ಹಲವು ದೃಷ್ಟಿಕೋನಗಳು. ದೃಷ್ಟಿಕೋನಗಳನ್ನು ಹಂಚಿಕೊಂಡು, ಅರ್ಥ ಮಾಡಿಕೊಂಡಾಗ ನಾವು ಮನುಷ್ಯರಾಗಿ ಒಗ್ಗೂಡುತ್ತೇವೆ. ಪ್ರೀತಿ ಮತ್ತು ಪರಸ್ಪರ ಗೌರವಗಳಲ್ಲಿ ಎಲ್ಲವೂ ಸೇರಿಕೊಳ್ಳಲೇಬೇಕು. ಅದೇ ಬೆಳವಣಿಗೆಯ ನಿಜವಾದ ಲಕ್ಷಣ’ ಎಂದು ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.