ಕರ್ನಾಟಕ

karnataka

ETV Bharat / sitara

‘ಕಾವೇರಿ ಕೂಗು’ ಅಭಿಯಾನಕ್ಕೆ ಕೈ ಜೋಡಿಸುವಂತೆ ಅಭಿಮಾನಿಗಳಲ್ಲಿ ರಕ್ಷಿತ್ ಶೆಟ್ಟಿ ಮನವಿ

ಬತ್ತಿ ಹೋಗುತ್ತಿರುವ ನದಿಗಳನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಆರಂಭವಾಗಿರುವ ‘ಕಾವೇರಿ ಕೂಗು’ ಅಭಿಯಾನದೊಂದಿಗೆ ಕೈ ಜೋಡಿಸುವಂತೆ ನಟ ರಕ್ಷಿತ್ ಶೆಟ್ಟಿ ಕರೆ ನೀಡಿದ್ದಾರೆ. ತಮ್ಮ ಟ್ವಿಟರ್​ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ನದಿಗಳನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ

By

Published : Aug 15, 2019, 9:33 PM IST

ಭಾರತದ ಜೀವನಾಡಿಗಳಾದ ನದಿಗಳು ಪ್ರತಿ ವರ್ಷ ಬತ್ತಿ ಹೋಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇನ್ನು 16-20 ವರ್ಷಗಳಲ್ಲಿ ಬಹುತೇಕ ನದಿಗಳೇ ಇರುವುದಿಲ್ಲ ಎಂಬ ಭಯ ಶುರುವಾಗಿದೆ. ಅಲ್ಲದೆ ಜೀವನದಿ ಕಾವೇರಿ ವರ್ಷದ 7 ತಿಂಗಳ ಕಾಲ ಸಮುದ್ರವನ್ನೇ ಸೇರದಿರುವುದು ನಿಜಕ್ಕೂ ಭಯಾನಕ ಸತ್ಯ.

ಹಿಂದಿನ 40 ವರ್ಷಗಳಿಗೆ ಹೋಲಿಸಿದರೆ ಕಾವೇರಿ ನೀರು ಶೇ. 46ರಷ್ಟು ಕಡಿಮೆ ಆಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಜನರು ನೀರು ಸಿಗದೆ ಪರದಾಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು, ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ರೂಪುರೇಷೆ ಒದಗಿಸುವ ನಿಟ್ಟಿನಲ್ಲಿ ‘ಕಾವೇರಿ ಕೂಗು’ ಎಂಬ ವಿಶಿಷ್ಟ ಅಭಿಯಾನ ಆರಂಭವಾಗಿದೆ. ಈ ಅಭಿಯಾನಕ್ಕೆ ಸಾಮಾನ್ಯ ಜನರೊಂದಿಗೆ ಸೆಲಬ್ರಿಟಿಗಳು ಕೂಡಾ ಕೈ ಜೋಡಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಕೂಡಾ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ವಿಡಿಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ರಕ್ಷಿತ್ ಶೆಟ್ಟಿ, ‘ಕಾವೇರಿ ಕೂಗು’ ಅಭಿಯಾನಕ್ಕೆ ಕೈ ಜೋಡಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

'ಕಾವೇರಿ ಶತಮಾನಗಳಿಂದ ಕೋಟ್ಯಂತರ ಕನ್ನಡಿಗರನ್ನು ಸಾಕಿ ಸಲಹಿದ್ದಾಳೆ. ಬತ್ತಿ ಹೋಗುತ್ತಿರುವ ಕಾವೇರಿಯನ್ನು ಉಳಿಸುವ ಜವಾಬ್ದಾರಿ ನಮ್ಮದು. ಹೆಚ್ಚು ಹೆಚ್ಚು ಮರಗಳನ್ನು ನೆಡುವ ಮೂಲಕ ಕಾವೇರಿಯನ್ನು ಉಳಿಸಬಹುದು. ನಾನೂ ಈ ಅಭಿಯಾನದೊಂದಿಗೆ ಇದ್ದೇನೆ. ನೀವೂ ಕೂಡಾ ಭಾಗವಹಿಸಿ' ಎಂದು ರಕ್ಷಿತ್ ಶೆಟ್ಟಿ ಕರೆ ನೀಡಿದ್ದಾರೆ.

ಈ ಅಭಿಯಾನ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಆರಂಭವಾಗಿದೆ. ‘ಕಾವೇರಿ ಕೂಗು’ ಒಂದು ವಿಶಿಷ್ಟವಾದ ಅಭಿಯಾನವಾಗಿದೆ. ಇದು ಭಾರತದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ರೂಪುರೇಷೆ ಒದಗಿಸುತ್ತದೆ. ಇಳಿಕೆಯಾಗಿರುವ ನದಿ ನೀರು ಖಂಡಿತ ವೃದ್ಧಿಯಾಗುತ್ತೆ. ನದಿಗಳು ಮತ್ತೆ ತುಂಬಿ ಹರಿಯುತ್ತವೆ ಎಂಬುದು ಈ ಅಭಿಯಾನದ ಉದ್ದೇಶವಾಗಿದೆ ಎನ್ನಲಾಗಿದೆ.

ABOUT THE AUTHOR

...view details