ಚೆನ್ನೈ:ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನ ನೆರವಿಗೆ ಧಾವಿಸಿರುವ ತಮಿಳು ನಟ-ನಿರ್ದೇಶಕ ರಾಘವ ಲಾರೆನ್ಸ್, ಆತನಿಗೆ ಚಿಕಿತ್ಸೆ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ರಾಜಪಾಲಯಂ ಊರಿನ ಗುರುಸೂರ್ಯ ಎಂಬ ಬಾಲಕ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದ. ಆಸ್ಪತ್ರೆಗೆ ಹಣ ಇಲ್ಲದೇ ಈತನ ಕುಟುಂಬ ಪರದಾಡುತ್ತಿತ್ತು. ರಾಘವ ಅವರ ಬಳಿ ಸಹಾಯ ಪಡೆಯಲು ಟ್ರೈನ್ ಏರಿ ಚೆನ್ನೈಗೆ ಬಂದಿಳಿದ್ದ ಈ ಕುಟುಂಬಕ್ಕೆ ಮುಂದಿನ ದಾರಿ ತೋಚಿರಲಿಲ್ಲ. ರಾಘವ ಅವರನ್ನು ಭೇಟಿ ಮಾಡಲು ಯಾವುದೇ ದಾರಿ ಕಾಣದೇ ಇಗ್ಮೋರೆ ರೈಲು ನಿಲ್ದಾಣದಲ್ಲೇ ಈತನ ಕುಟುಂಬ ತಂಗಿತ್ತು.
ಹೀಗೆ ನಟನ ಬಳಿ ಸಹಾಯ ಹಸ್ತ ಅರಸಿ ಬಂದಿದ್ದ ಸೂರ್ಯನ ಕುರಿತು ಪತ್ರಿಕೆಯೊಂದು ವರದಿ ಪ್ರಕಟಿಸಿತು. ಇದನ್ನು ಗಮನಿಸಿದ ರಾಘವ ರಕ್ಷಣೆಗೆ ಮುಂದಾಗಿ, ಸೂರ್ಯ ಹಾಗೂ ಆತನ ತಾಯಿ, ಸಹೋದರನನ್ನು ತನ್ನ ಮನೆಗೆ ಕರೆಯಿಸಿಕೊಂಡಿದ್ದಾರೆ. ಅವರಿಗೆ ಊಟ ಮಾಡಿಸಿ, ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಕೊಡಿಸಿದ್ದಾರೆ. ಜತೆಗೆ ಪ್ರೀತಿಯಿಂದ ಮಾತನಾಡಿಸಿ ಕೈಯಲ್ಲಿ ಹಣ ನೀಡಿ ಧೈರ್ಯ ತುಂಬಿದ್ದಾರೆ. ಇಂತಹ ಸಮಾಜ ಕಾರ್ಯಕ್ಕೆ ನೆರವಾದ ಆ ಪತ್ರಿಕೆ ಹಾಗೂ ತನ್ನ ಅಭಿಮಾನಿಗಳಿಗೆ ಥ್ಯಾಂಕ್ಸ್ ಕೂಡ ಹೇಳಿದ್ದಾರೆ ರಾಘವ.
ಚಾರಿಟಬಲ್ ಟ್ರಸ್ಟ್ ನಡೆಸುತ್ತಿರುವ ರಾಘವ ಆ ಮೂಲಕ ಎಷ್ಟೋ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಆರೋಗ್ಯ ಹಾಗೂ ಇನ್ನಿತರ ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ. ಕೆಲವು ಬಡವರಿಗೆ ಮನೆಗಳನ್ನೂ ಕಟ್ಟಿಸಿಕೊಟ್ಟಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳುತ್ತಿದ್ದ ಸಾವಿರಾರು ಮಕ್ಕಳಿಗೆ ಶಸ್ತ್ರಚಿಕಿತ್ಸೆ ಕೂಡ ಮಾಡಿಸಿದ್ದಾರೆ. ಹೀಗೆ ಸಮಾಜಕ್ಕೆ ಪರೋಪಕಾರಿಯಾಗಿ ಬಾಳುತ್ತಿರುವ ರಾಘವ ಅವರ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.