ಚಂದನವನದಲ್ಲಿ ಹೊಸತನದ ಗಾಳಿ ಬೀಸುತ್ತಿದೆ. ಸ್ಯಾಂಡಲ್ವುಡ್ನ ತಾರೆಯರು ಪ್ರಶಂಸನಾರ್ಹ ನಡೆ ಅನುಸರಿಸುತ್ತಿದ್ದಾರೆ. ಅದರಲ್ಲೂ ಅದ್ಧೂರಿ ಬರ್ತ್ಡೇಗಳಿಗೆ ಬೈ ಬೈ ಹೇಳುತ್ತಿದ್ದಾರೆ.
ಹೌದು, ಕಳೆದ ಕಿಚ್ಚ ಸುದೀಪ್ ಅವರು ಬರ್ತ್ ಡೇ ಆಚರಿಸಿಕೊಂಡಿರಲಿಲ್ಲ. ಹುಟ್ಟುಹಬ್ಬಕ್ಕೆ ಹಣ ಖರ್ಚು ಮಾಡುವ ಬದಲು ಸತ್ಕಾರ್ಯಕ್ಕೆ ಬಳಸಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು. ಜತೆಗೆ ತಮ್ಮ ಜನ್ಮದಿನದಂದು ಮನೆಯಲ್ಲಿರದೆ ಕುಟುಂಬದ ಜತೆ ಹೊರಗೆ ಹೋಗಿದ್ದರು. ಅದೇ ರೀತಿ ದರ್ಶನ್ ಕೂಡ ನಡೆದುಕೊಂಡರು. ಈ ವರ್ಷ ಬರ್ತ್ಡೇ ಬೇಡವೆ ಬೇಡ. ಹೂವು ಹಾರಗಳಿಗೆ ವ್ಯಯಿಸುವ ಹಣದಲ್ಲಿ ಅನಾಥಾಶ್ರಮಗಳಿಗೆ ದವಸ-ಧಾನ್ಯ ನೀಡಿ ಎಂದು ಕರೆನೀಡಿದ್ದರು. ಅದರಂತೆ ಅಭಿಮಾನಿಗಳು ನಡೆದುಕೊಂಡು, ನೆಚ್ಚಿನ ನಟನಿಗೆ ಗೌರವ ನೀಡಿದ್ದರು. ಇದಾದ ನಂತರ ರಾಕಿಂಗ್ ಸ್ಟಾರ್ ಕೂಡ ದುಂದುವೆಚ್ಚದ ಹುಟ್ಟುಹಬ್ಬಕ್ಕೆ ಫುಲ್ ಸ್ಟಾಪ್ ಹೇಳಿದ್ರು.
ಇದೀಗ ಕನ್ನಡ ಚಿತ್ರರಂಗದ ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ಕೂಡ ಹುಟ್ಟುಹಬ್ಬ ಬೇಡ ಎಂದಿದ್ದಾರೆ. ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನ. ಅಪ್ಪು ಬರ್ತ್ ಡೇ ಸೆಬಬ್ರೇಷನ್ಗೆ ಫ್ಯಾನ್ಸ್ ಇನ್ನಿಲ್ಲದ ತಯಾರಿ ನಡೆಸಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ರಾತ್ರೋರಾತ್ರಿ ಅಪ್ಪು ಮನೆ ಬಳಿ ಬಂದು ಕೇಕ್ ಕತ್ತರಿಸಿ ಸಂಭ್ರಮ ಪಡುವ ತವಕದಲ್ಲಿದ್ದರು. ಅದರೆ, ಈ ಭಾರಿ ಯುವರತ್ನ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಇಂದು ಸೆಲ್ಫಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿರು ನಟಸಾರ್ವಭೌಮ, ನಾನು 16ರ ರಾತ್ರಿ ಮನೆಯಲ್ಲಿರೋದಿಲ್ಲ.17 ರ ಮುಂಜಾನೆ ಮನೆಗೆ ಬರ್ತೀನಿ. ಹೀಗಾಗಿ ಅಂದು ರಾತ್ರಿ ಯಾರೂ ದಯವಿಟ್ಟು ಮನೆ ಕಡೆ ಬರಬೇಡಿ. ಇದರ ಜತೆಗೆ ಇನ್ನೊಂದು ವಿಚಾರ ಏನಂದ್ರೆ ಅಂದು ಮುಂಂಜಾನೆ ಯಾರೂ ಹಾರ, ಕೇಕ್,ಹೂಗುಚ್ಚ ತರಬೇಡಿ. ಅದಕ್ಕೆ ವ್ಯಯಿಸುವ ಹಣ ಒಳ್ಳೆ ಕೆಲಸಕ್ಕೆ ಬಳಸಿ. ಹೃದಯದಲ್ಲಿ ಪ್ರೀತಿ ತುಂಬಿಕೊಂಡು ಬರಿಗೈಯಲ್ಲಿ ಬಂದು ವಿಶ್ ಮಾಡಿ. ನಮಗೆ ಅಷ್ಟೇ ಸಾಕು. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ ನಮ್ಮ ಕುಟುಂಬದ ಮೇಲೆ ಹೀಗೆ ಇರಲಿ ಎಂದು ಅಭಿಮಾನಿ ದೇವರುಗಳಲ್ಲಿ ಭಿನ್ನವಿಸಿಕೊಂಡಿದ್ದಾರೆ ಅಪ್ಪು.