ಬೆಂಗಳೂರು: ವಿಶ್ವವನ್ನೇ ತತ್ತರಿಸುವಂತೆ ಮಾಡಿರುವ ಕೊರೊನಾ ಮಹಾಮಾರಿ ವಿರುದ್ಧದ ಸರ್ಕಾರದ ಹೋರಾಟಕ್ಕೆ ನಟ ಪುನೀತ್ ರಾಜಕುಮಾರ್ ಕೈಜೋಡಿಸಿದ್ದಾರೆ.
ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ಐವತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇಂದು ಬೆಳಗ್ಗೆ ಸಿಎಂ ನಿವಾಸ ಧವಳಗಿರಿಗೆ ಭೇಟಿ ನೀಡಿದ್ದ ಅವರು 50 ಲಕ್ಷ ರೂಪಾಯಿ ಚೆಕ್ ಹಸ್ತಾಂತರ ಮಾಡಿದರು. ಈ ವೇಳೆ ಡಿಸಿಎಂ ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ಕೊಟ್ಟ ನಟ ಪುನೀತ್ ರಾಜಕುಮಾರ್ ಬಳಿಕ ಮಾತನಾಡಿದ ಪವರ್ ಸ್ಟಾರ್, ಸರ್ಕಾರ ಹೇಳುವ ಪ್ರತಿಯೊಂದು ನಿರ್ದೇಶನವನ್ನೂ ಪಾಲಿಸಬೇಕು. ಅಭಿಮಾನಿಗಳು ಕೂಡಾ ಯಾರೂ ಮನೆಯಿಂದ ಹೊರಬರಬೇಡಿ. ನಮ್ಮ ಒಳ್ಳೆಯದಕ್ಕೆ ಸರ್ಕಾರ, ಪ್ರಧಾನಿ, ಸಿಎಂ ಮುನ್ನೆಚ್ಚರಿಕೆ ವಹಿಸುವಂತೆ ಹೇಳುತ್ತಿದ್ದಾರೆ. ಸ್ವಲ್ಪ ದಿನ ಮನೆಯಲ್ಲಿರಲು ಕಷ್ಟ ಆಗಬಹುದು. ನಮಗೂ ಆಗುತ್ತೆ, ಆದರೆ ಅದು ಅನಿವಾರ್ಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದರು.
ಎಲ್ಲರೂ ಮನೆಯಲ್ಲಿದ್ದು ಸರ್ಕಾರದ ಆದೇಶ ಪಾಲಿಸುವಂತೆ ಜನತೆಗೆ ಪವರ್ಸ್ಟಾರ್ ಕರೆ ಇನ್ನು, ಬಡವರು, ಸಣ್ಣ ಮನೆ, ಸ್ಲಂ ನಲ್ಲಿ ಇರುವವರಿಗೆ ಸಣ್ಣ ಜಾಗದಲ್ಲಿ ಇರಲು ಕಷ್ಟ ಆಗಬಹುದು. ಸ್ವಲ್ಪ ದಿನ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಸರ್ಕಾರ, ಬಿಬಿಎಂಪಿ ಬಡವರಿಗೆ ಊಟದ ವ್ಯವಸ್ಥೆ ಮಾಡುತ್ತಿದೆ. ಜನರು ಸಹಕರಿಸಿ ಎಂದು ಪುನೀತ್ ರಾಜ್ಕುಮಾರ್ ಮನವಿ ಮಾಡಿದ್ರು.