ಇಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಮೊದಲಿಗೆ ಅಭಿ ಅವರ 'ಅಮರ್' ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ. ಖಂಡಿತವಾಗಿಯೂ ಈ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂದಿದ್ದಾರೆ. ನಾನು ವಿಶ್ ಮಾಡುತ್ತಿರುವುದು ಕೇವಲ ತೋರಿಕೆಗೆ ಎಂದು ಭಾವಿಸಿಕೊಂಡರೆ, ಅಂತಹವರಿಗೆ ಒಂದು ಮಾತು ಹೇಳಲು ಇಚ್ಛಿಸುತ್ತೇನೆ, ನಾನು ಎಲ್ಲದಕ್ಕಿಂತಲೂ ಹೆಚ್ಚು ಸಂಬಂಧಗಳಿಗೆ ಬೆಲೆ ಕೊಡುತ್ತೇನೆ ಎಂದಿದ್ದಾರೆ. ಇನ್ನು ಸುಮಲತಾ ಅವರ ಗೆಲುವಿಗೆ ಶುಭ ಕೋರಿರುವ ನಿಖಿಲ್, ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಜತೆ ಕೈ ಜೋಡಿಸುತ್ತೇನೆ ಎಂದಿದ್ದಾರೆ.
ಮಂಡ್ಯ ಚುನಾವಣೆ ಸೋಲಿನ ಸಂಪೂರ್ಣ ಹೊಣೆ ತಾನೇ ವಹಿಸಿಕೊಳ್ಳುತ್ತೇನೆ ಎಂದಿರುವ ನಿಖಿಲ್, ಎಲ್ಲದಕ್ಕೂ ನಾನೇ ಜವಾಬ್ದಾರಿ, ನನ್ನನ್ನು ಮಾತ್ರ ದೂರಿ. ಬದಲಾಗಿ ನನ್ನ ಪಕ್ಷದ MLA, MLC ಅಥವಾ ಕಾರ್ಯಕರ್ತರನ್ನು ಹಾಗೂ ದೇವೇಗೌಡರನ್ನು ದೂರಬೇಡಿ ಎಂದಿದ್ದಾರೆ.
ನಿಖಿಲ್ ಕುಮಾರ ಸ್ವಾಮಿ ಇನ್ಸ್ಟಾಗ್ರಾಂ ಪೋಸ್ಟ್ ವಿವರಣೆ ಇಲ್ಲಿದೆ ನೋಡಿ...
'ನಾಳೆ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಮೊದಲ ಸಿನಿಮಾ 'ಅಮರ್' ಭಾರಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸುತ್ತಿದ್ದೇನೆ. ದಯವಿಟ್ಟು ಚಿತ್ರಮಂದಿರಗಳಿಗೆ ಹೋಗಿ ಆ ಸಿನಿಮಾ ನೋಡಿ. ಇದು ಕೇವಲ ತೋರ್ಪಡಿಕೆಗಾಗಿ ವಿಶ್ ಮಾಡುತ್ತಿದ್ದೇನೆ ಎಂದು ತಿಳಿದುಕೊಳ್ಳುವವರಿಗೆ ನಾನು ಹೇಳುವುದೇನೆಂದರೆ, 'ನಾನು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುತ್ತೇನೆ. ಇದನ್ನೇ ನಾನು ಚುನಾವಣಾ ಪ್ರಚಾರದ ಸಮಯದಲ್ಲಿಯೂ ಒತ್ತಿ ಹೇಳುತ್ತಿದ್ದೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದಕ್ಕೆ ಶುಭ ಕೋರುತ್ತೇನೆ.