ಮಾಯಾ ಲೋಕವೇ ಹಾಗೆ. ನಿಜ ಜೀವನದಲ್ಲಿ ಏನು ಸಾಧ್ಯವಿಲ್ಲವೋ ಅದೆಲ್ಲ ಕ್ಯಾಮರಾ ಮುಂದೆ ಸಾಧ್ಯವಾಗಿ ಬಿಡುತ್ತದೆ. ‘ಕಾಲ ಪಾನಿ’ ಮಲಯಾಳಂ ಚಿತ್ರದಲ್ಲಿ ನಟ ಮೋಹನ್ ಲಾಲ್ ಪೊಲೀಸರ ಬೂಟು ನೆಕ್ಕುವುದು ಕಂಡಿದ್ದೇವೆ. ಅದೇ ರೀತಿ ಮಲಯಾಳಂ ನ ಮೇರು ನಟ ಮಮ್ಮುಟ್ಟಿ ಕನ್ನಡ ಚಿತ್ರ ರಂಗದ ರಂಗಕರ್ಮಿ ಪಿ. ಡಿ. ಸತೀಶ್ ಅವರ ಕಾಲು ಒತ್ತುವ ನಟನೆ ಮಾಡಿದ್ರಂತೆ.
ಹೌದು, ಅದು 2010ರಲ್ಲಿ ಬಿಡುಗಡೆಯಾಗಿ ಜಯಭೇರಿ ಭಾರಿಸಿದ ಮಲಯಾಳಂ ಚಿತ್ರ ‘ಕುಟ್ಟಿ ಸ್ರಾಂಕ್’ನ ಸನ್ನಿವೇಶ. ಪಿ. ಡಿ. ಸತೀಶ್ ಅವರದ್ದು ಮುಖ್ಯ ವಿಲನ್ ಪಾತ್ರ. ಇದು ಸತೀಶ್ ಅವರ ಮೊದಲ ಮಲಯಾಳಂ ಸಿನಿಮಾ. ಇವರಿಗೆ ಮಮ್ಮುಟ್ಟಿ ಅಂದರೆ ಮೊದಲೇ ಕಾಲು ನಡುಕ. ಅಂತಹದ್ರಲ್ಲಿ ಮೊದಲ ದೃಶ್ಯದಲ್ಲೇ ಅಂತಹ ದಿಗ್ಗಜ ನಟ ನನ್ನ ಕಾಲಿನ ಚಪ್ಪಲಿ ತೆಗೆದು ಕಾಲು ಒತ್ತುವುದು ಅಂದ್ರೆ ನಿಜಕ್ಕೂ ಎಂತಹವರೂ ಒಮ್ಮೆ ತಬ್ಬಿಬ್ಬಾಗುತ್ತಾರೆ. ಅದೇ ರೀತಿ ಸತೀಶ್ ಕಾಲುಗಳು ನಡುಗುತ್ತಿದ್ದವಂತೆ. ಆಗ, ಅದನ್ನು ಗಮನಿಸಿದ ಮಮ್ಮುಟಿ ಸತೀಶ್ ಅವರನ್ನು ಸಮಾಧಾನಿಸಿದ್ದಾರೆ. ಜೊತೆಗೆ ಊಟದ ವೇಳೆ ಸತೀಶ್ ಅವರಿಗೆ ಬಾಯಿಲ್ಡ್ ರೈಸ್ ಬಡಿಸಿ ಕಾಳಜಿ ತೋರಿದ್ದನ್ನು ಸತೀಶ್ ಸ್ಮರಿಸಿಕೊಂಡಿದ್ದಾರೆ.