ಕಿರುತೆರೆಯ ಜನಪ್ರಿಯ ನಟರಲ್ಲೊಬ್ಬರಾದ ಹಾಗೂ ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್, ಲಾಕ್ಡೌನ್ ಆದ ನಂತರ ಬಡವರಿಗೆ, ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲದೆ, ಕಿರಣ್ ಫೌಂಡೇಶನ್ ವತಿಯಿಂದ ಕೋವಿಡ್-19 ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಿದ್ದಾರೆ. ಇತ್ತೀಚೆಗಷ್ಟೇ ಶಾಲಾ-ಕಾಲೇಜುಗಳ ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕೆಂದು ಎಲ್ಲ ಪೋಷಕರ ಪರವಾಗಿ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರ ಬಳಿ ವಿನಂತಿಸಿಕೊಂಡಿದ್ದರು. ಇದೀಗ ಕೊರೊನಾ ವಾರಿಯರ್ಸ್ಗಳಾದ ವೈದ್ಯರ ಮೇಲೆ ಹಲ್ಲೆ ನಡೆಸದಂತೆ ನಟ ಕಿರಣ್ ರಾಜ್ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಕಿರಣ್ ರಾಜ್ 'ಪರಿಸ್ಥಿತಿ ನಿರ್ಣಾಯಕವಾಗಿದೆ, ನೀವು ಮುನಿಸಿಕೊಂಡಿದ್ದೀರಿ, ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಭಯವಿದೆ, ನೀವು ಅಸಹಾಯಕರಾಗಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ ಪಿಪಿಇ ಕಿಟ್ ಧರಿಸುವ ವ್ಯಕ್ತಿಯ ಬಗ್ಗೆ ಯೋಚಿಸಿ. ಇದು ಉಸಿರುಗಟ್ಟುವಿಕೆ, ನಿರ್ಜಲೀಕರಣ, ಕೆಲವೊಮ್ಮೆ ಉಸಿರಾಟದ ತೊಂದರೆ ಉಂಟುಮಾಡುತ್ತದೆ. ತಮ್ಮ ಮುಖದಿಂದ ಬರುವ ಬೆವರನ್ನು ಕೆಲವೊಮ್ಮೆ ಅವರೇ ಕುಡಿಯುತ್ತಾರೆ. ಅವರು ವಾಶ್ ರೂಂಗೆ ಸಹ ಹೋಗಲು ಸಾಧ್ಯವಿಲ್ಲ. ಅವರು ಇದನ್ನು 6 ಗಂಟೆಗಳ ಕಾಲ ಧರಿಸುತ್ತಾರೆ. ಅವರು ಸಮಾಜ ಮತ್ತು ಜನರಿಗೆ ಸೇವೆ ಸಲ್ಲಿಸಲು ಈ ವೃತ್ತಿಯನ್ನು ಆರಿಸಿಕೊಂಡವರು. ಆದರೆ ವೈದ್ಯರ ಮೇಲಿನ ಹಲ್ಲೆ ಸ್ವೀಕಾರಾರ್ಹವಲ್ಲ. ಅವರಿಗೂ ಕುಟುಂಬವಿದೆ. ಅವರು ಸಮಾಜಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ. ಇದು ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವ ಸಮಯ ಎಂದು ಬರೆದಿದ್ದಾರೆ.