ನಟ ದುನಿಯಾ ವಿಜಯ್ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ತಮ್ಮದೇ 'ಸಲಗ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದುವರೆಗೆ ಆ್ಯಕ್ಷನ್ ಹೀರೋ ಆಗಿದ್ದ ಕರಿಚಿರತೆ ಈಗ ಆ್ಯಕ್ಷನ್ ಕಟ್ ಹೇಳುತ್ತಿದೆ.
ಈಗಾಗಲೇ ಯಶಸ್ವಿ ನಟ ಹಾಗೂ ಒಂದೆರಡು ಚಿತ್ರಗಳಿಗೆ ಕಥೆ ಬರೆದಿರುವ ಮಾಸ್ತಿಗುಡಿ, ಈಗ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಸಲಗ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಸಲಗಕ್ಕೆ ತಾವೇ ಹಣ ಹಾಕುತ್ತಿದ್ದಾರೆ. ಈ ಚಿತ್ರದಲ್ಲಿ ಡಾಲಿ ಖ್ಯಾತಿಯ ಧನಂಜಯ್ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ.
ವಿಜಿಯ ನೂತನ ಪ್ರಯತ್ನಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ. ಒಬ್ಬ ನಟ ನಿರ್ದೇಶಕನಾಗುವುದು ದೊಡ್ಡದು. ಅಷ್ಟೇ ಒತ್ತಡ ಕೂಡ ಇರುತ್ತದೆ. ಈ ಕ್ಷಣವನ್ನೂ ಆನಂದಿಸಿ,ಯಶಸ್ಸು ಗಳಿಸಿ ಎಂದು ಹಾರೈಸಿದ್ದಾರೆ.
ಕಿಚ್ಚನ ಹಾರೈಕೆ ವಿಜಿಗೆ ಆನೆ ಬಲ ನೀಡಿದಂತಾಗಿದೆ. ಸುದೀಪ್ ಅವರಿಗೆ ಹೃದಯಪೂರ್ವಕ ಧನ್ಯವಾದ ಹೇಳಿರುವ ಅವರು, ನಿಮ್ಮಂತ ಹಿರಿಯ ನಟರ ಆಶೀರ್ವಾದ ಹಾಗೂ ಪ್ರೋತ್ಸಾಹ ನನಗೆ ಬಲ ನೀಡಿದೆ ಎಂದಿದ್ದಾರೆ.
ಇನ್ನು ಕಳೆದ ವರ್ಷ ವಿಜಯ್ ಅವರ 'ಕುಸ್ತಿ' ಚಿತ್ರದ ಡೈಲಾಗ್ವೊಂದು ವಿವಾದ ಸೃಷ್ಟಿಸಿತ್ತು. ಸುದೀಪ್ ಹಾಗೂ ವಿಜಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಜಗಳವಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಸುದೀಪ್, ತಮ್ಮ ಅಭಿಮಾನಿಗಳು ಬುದ್ಧಿವಾದ ಹೇಳಿದ್ದರು. ಜತೆಗೆ ವಿಜಯ್ ಅವರ ಕುಸ್ತಿ ಚಿತ್ರಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದರು. ಇದೀಗ ಮತ್ತೊಮ್ಮೆ ವಿಜಿಯ ಬೆನ್ನು ತಟ್ಟಿದ್ದಾರೆ. ಇದು ಸ್ಯಾಂಡಲ್ವುಡ್ ತಾರೆಯರು ಒಗ್ಗಟ್ಟು ತೋರ್ಪಡಿಸುತ್ತಿದೆ.