ಕಾಜಲ್ ಅವರ ಗ್ಲಾಮರ್ ಲುಕ್ ನೋಡಿದವರು ಅವರ ನೈಜ ಸೌಂದರ್ಯ ಒಪ್ಪಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತೆ. ಮೇಕಪ್ ಹಾಕಿಕೊಂಡು ಸೌಂದರ್ಯದ ಖನಿಯಂತೆ ಕಾಣಿಸುವ ಈ ನಟಿಯ ರಿಯಲ್ ಫೇಸ್ ನೋಡುಗರಿಗೆ ಅಚ್ಚರಿಯನ್ನುಂಟು ಮಾಡುತ್ತದೆ.
ಎಲ್ಲರೂ ಕೂಡ ಸುಂದರವಾಗಿ ಕಾಣಿಸಿಕೊಳ್ಳಲು ಬಯಸುವುದು ಸಾಮಾನ್ಯ. ಅದರಲ್ಲೂ ಗ್ಲಾಮರ್ ಲೋಕದಲ್ಲಿರುವವರಿಗಂತೂ ಈ ಬಯಕೆ ಸ್ವಲ್ಪ ಜಾಸ್ತಿನೇ ಅಂತಾ ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, ಕಾಜಲ್ ಮಾತ್ರ ಮೇಕಪ್ ಇಲ್ಲದ ತಮ್ಮ ಪಟವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಇದರ ಜತೆಗೆ ಬಾಹ್ಯ ಸೌಂದರ್ಯ ಹಾಗೂ ಅಂತರಾಳದ ಸೌಂದರ್ಯದ ಬಗ್ಗೆ ಅರ್ಥಗರ್ಭಿತವಾಗಿ ಬರೆದುಕೊಂಡಿದ್ದಾರೆ.
ಜನರು ತಮ್ಮನ್ನು ತಾವು ಅತ್ಮಾವಲೋಕನ ಮಾಡಿಕೊಳ್ಳುವುದಿಲ್ಲ. ನಮ್ಮ ಸೌಂದರ್ಯವನ್ನು ಅರಿತುಕೊಳ್ಳುವುದಿಲ್ಲ. ಯಾಕಂದ್ರೆ ಸಾಮಾಜಿಕ ಮಾಧ್ಯಮಗಳು ನಮ್ಮ ಸ್ವಾಭಿಮಾನ ನುಂಗಿಬಿಟ್ಟಿದೆ. ಬಿಲಿಯನ್ಗಂಟಲೆ ದುಡ್ಡು ಖುರ್ಚು ಮಾಡುವ ಸೌಂದರ್ಯ ವರ್ಧಕ ಕಂಪನಿಗಳು ನಿಮಗೆ ಸುಂದರವಾದ ತ್ವಚೆ ನೀಡುತ್ತೇವೆ ಎಂದು ಹೇಳಿಕೊಳ್ಳುತ್ತವೆ. ಇದರೊಂದಿಗೆ ಎಲ್ಲೆಡೆ ಅಹಂ ಎನ್ನುವುದು ನುಸುಳಿದೆ. ಇವೆರಡರ ನಡುವೆ ಯಾವುದಕ್ಕೆ ಜನ ಹೆಚ್ಚು ಮುಗಿಬಿದ್ದಿರುತ್ತಾರೋ, ನಾವೂ ಆ ಕಡೆನೇ ವಾಲುತ್ತೇವೆ. ಆದರೆ, ಮತ್ತೊಬ್ಬರನ್ನು ನೋಡಿ ಬದಲಾಗುವ ಮುನ್ನ, ನಮ್ಮನ್ನು ನಾವು ಅರಿತುಕೊಂಡು, ವಾಸ್ತವತೆಯನ್ನು ಮುಕ್ತವಾಗಿ ಒಪ್ಪಿಕೊಳ್ಳಲು ಪ್ರಾರಂಭಿಸಿದಾಗ ಮಾತ್ರ ನಾವು ಸಂತೋಷವಾಗಿರಲು ಸಾಧ್ಯ ಎನ್ನುತ್ತಾರೆ ಕಾಜಲ್.
ಇನ್ನು ಮೇಕಪ್ ಕೇವಲ ನಮ್ಮ ಬಾಹ್ಯವಾಗಿ ಸುಂದರವಾಗಿಸುತ್ತದೆ. ಆದರೆ, ನೀವು ಯಾರು ? ನಿಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ಅದು ತೋರಿಸುವುದಿಲ್ಲ. ನಮ್ಮನ್ನು ನಾವು ಒಪ್ಪಿಕೊಳ್ಳುವಲ್ಲಿ ನಿಜವಾದ ಸೌಂದರ್ಯ ಅಡಗಿದೆ ಎಂದು ಹೇಳಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ಸೌಂದರ್ಯ ವರ್ಧಕ ಕಂಪನಿಯ ಜಾಹೀರಾತು ತಿರಸ್ಕರಿಸಿದ್ದ ನಟಿ ಸಾಯಿ ಪಲ್ಲವಿ, ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದಿಲ್ಲ. ನಮ್ಮ ನೈಜ ಬಣ್ಣವನ್ನು ನಾವು ಪ್ರೀತಿಯಿಂದ ಒಪ್ಪಿಕೊಳ್ಳಬೇಕು ಎಂದು ದೊಡ್ಡತನ ಮೆರೆದಿದ್ದರು. ಇದೀಗ ಕಾಜಲ್ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ. ಕಾಜಲ್ ಅವರ ಈ ನಡೆಗೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.