'ಪದ್ಮಿನಿ' ಕಳುವು ಮಾಡಿದ ಕಥೆ ಎಂದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ವಿರುದ್ಧ ಹಿರಿಯ ಸಾಹಿತಿ, ಲೇಖಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಲೇಖಕರಿಗೆ ಕೃಜ್ಞತೆ ಸಲ್ಲಿಸುವ ಸೌಜನ್ಯತೆಯೂ ನಿರ್ದೇಶಕರಿಗೆ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಫೇಸ್ಬುಕ್ನಲ್ಲಿ ನಿರ್ದೇಶಕರ ವಿರುದ್ಧ ವಸುದೇಂದ್ರ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
“ಪ್ರೀಮಿಯರ್ ಪದ್ಮಿನಿ” ಸಿನಿಮಾದಲ್ಲಿರುವ ನಂಜುಂಡಿ ಪಾತ್ರವು ನನ್ನ “ವರ್ಣಮಯ” ಪುಸ್ತಕದಲ್ಲಿರುವ ಸುದೀರ್ಘ ಪ್ರಬಂಧ “ನಂಜುಂಡಿ” ಯಿಂದ ತೆಗೆದುಕೊಂಡಿದ್ದು. ಅದರ ಬಹುತೇಕ ವಿವರಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ನಿರ್ದೇಶಕರು ಮೊದಲಿಗೆ ನನ್ನನ್ನು ಭೇಟಿಯಾಗಿ, ನನ್ನ ಎರಡು ಪ್ರಬಂಧಗಳನ್ನು ಬಳಸಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಸಂಭಾವನೆಯನ್ನೂ ನಿಗದಿ ಪಡಿಸಲಾಗಿತ್ತು. ಅನಂತರ ಕರಾರು ಪತ್ರವನ್ನು ಶುಭದಿನದಂದು ಮಾಡಿಕೊಳ್ಳೋಣ ಎಂದು ಹೇಳಿ ಹೋದವರು ಮತ್ತೆ ವಾಪಾಸಾಗಲಿಲ್ಲ. ಸಿನಿಮಾ ಬಿಡುಗಡೆಗೆ ಮುಂಚೆ ಕರೆ ಮಾಡಿ, “ಸಿನಿಮಾ ಮಾಡಿಬಿಟ್ಟೆ ಸಾರ್. ಆ ಪ್ರಬಂಧದ ಪ್ರೇರಣೆ ನನಗೆ ಸಾಕಷ್ಟಿದೆ. ಅದನ್ನು ಟೈಟಲ್ ಕಾರ್ಡ್‌ನಲ್ಲಿ ಹಾಕಬಹುದೆ?” ಎಂದು ವಿಚಾರಿಸಿದರು. ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ನನಗೆ ಇಷ್ಟವಾಗಲಿಲ್ಲ. “ಪ್ರೇರಣೆಯನ್ನು ಪಡೆದುಕೊಂಡಿದ್ದರೆ ನನಗೆ ಸಮಸ್ಯೆಯಿಲ್ಲ. ಆದರೆ ಪ್ರಬಂಧದ ದೃಶ್ಯಗಳನ್ನು ತೆಗೆದಕೊಳ್ಳುವಂತಿಲ್ಲ. ಯಾವುದೋ ಮತ್ತೊಂದು ಕತೆಯ ಭಾಗವಾಗಿ ನನ್ನ ಪಾತ್ರಗಳು ಬರುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದ್ದೆ. ಅನಂತರ ಅವರು ಸುಮ್ಮನಾಗಿಬಿಟ್ಟರು. ಈಗ ಸಿನಿಮಾದಲ್ಲಿ ಬಹುತೇಕ “ನಂಜುಂಡಿ” ಪಾತ್ರದ ದೃಶ್ಯಗಳು ನನ್ನ ಪ್ರಬಂಧದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ ಎಂದು ವಸುದೇಂದ್ರ ಬರೆದುಕೊಂಡಿದ್ದಾರೆ.