ಕನ್ನಡ ಸಿನಿಮಾಗಳ ಮೇಲೆ ಪರಭಾಷೆಯ ಸಿನಿಮಾಗಳ ದಬ್ಬಾಳಿಕೆ ಆಗುತ್ತಿರೋದು ನಿನ್ನೆ ಮೊನ್ನೆಯದಲ್ಲ. ಡಾ.ರಾಜ್ ಕುಮಾರ್ ಕಾಲದಿಂದಲೂ ಕನ್ನಡ ಚಿತ್ರರಂಗಕ್ಕೆ ಪರಭಾಷೆ ಸಿನಿಮಾಗಳಿಂದ ತೊಂದರೆ ಆಗುತ್ತಲೇ ಇದೆ.
ಸದ್ಯ ಎರಡು ವರ್ಷದಿಂದ ಕೊರೊನಾ ಎಂಬ ಹೆಮ್ಮಾರಿಯ ಹೊಡೆತಕ್ಕೆ ನಲಿಗೆ ಹೋಗಿದ್ದ ಕನ್ನಡ ಚಿತ್ರರಂಗ ನಿಧಾನವಾಗಿ ಚೇತರಿಕೆ ಕಾಣುವ ಹೊತ್ತಲ್ಲಿ ಮತ್ತೆ ಪರಭಾಷೆಯ ಸಿನಿಮಾಗಳ ಹಾವಳಿ ಹೆಚ್ಚಾಗುತ್ತಿದೆ. ಇದರ ಎಫೆಕ್ಟ್ ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಸಿನಿಮಾಗಳ ಮೇಲೆ ಆಗುತ್ತಿದೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶುಕ್ರವಾರ ಬಿಡುಗಡೆ ಆಗುತ್ತಿರುವ ಹಿನ್ನೆಲೆ, ಕನ್ನಡದಲ್ಲಿ ರಿಲೀಸ್ ಆಗಿರುವ ಸಿನಿಮಾಗಳ ಮೇಲೆ ಇದರ ಎಫೆಕ್ಟ್ ಆಗಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾಕ್ಕೂ ಇದು ಎಫೆಕ್ಟ್ ಆಗುವ ಸಾಧ್ಯತೆ ಇದೆ. ಹಲವಾರು ವರ್ಷಗಳಿಂದ ಇರುವ ಈ ಸಮಸ್ಯೆ ಬಗ್ಗೆ ನಟ ಗಣೇಶ್ ಮುಕ್ತವಾಗಿ ಮಾತನಾಡಿದ್ದಾರೆ.
ತಮ್ಮ ಸಖತ್ ಸಿನಿಮಾ ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ಗಣೇಶ್, ಪರಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆ ಆದಾಗ, ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಸಮಸ್ಯೆ ಕಾಡುತ್ತೆ ಅನ್ನೋದು, ನಾನು ಸಿನಿಮಾ ಹೀರೋ ಆಗೋದಿಕ್ಕಿಂತ ಮುಂಚೆ ಕೇಳ್ತಾ ಇದ್ದೀನಿ. ಕರ್ನಾಟಕದಲ್ಲಿ ಬೇರೆ ಭಾಷೆಯ ಸಿನಿಮಾಗಳಿಂದ ಕನ್ನಡ ಚಿತ್ರಗಳ ಮೇಲೆ ಆಗುವ ತೊಂದರೆ ಹೊಸತೇನಲ್ಲ.
ಯಾಕಂದ್ರೆ ಬೇರೆ ಭಾಷೆಯವರು ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮಾಡ್ತಾರೆ. ಅಂತಹ ಸಿನಿಮಾಗಳನ್ನ ನಮ್ಮ ಕನ್ನಡದವರು ನೋಡ್ತಾರೆ. ಅದೇ ರೀತಿ ನಾವು ಕನ್ನಡದಲ್ಲಿ ಬಿಗ್ ಬಜೆಟ್ ಜೊತೆಗೆ, ಒಳ್ಳೆ ಕಥೆಯುಳ್ಳ ಸಿನಿಮಾಗಳನ್ನ ಮಾಡಬೇಕು ಅಂತಾ ಗಣೇಶ್ ಹೇಳಿದರು.