ಗೋಲ್ಡನ್ ಸ್ಟಾರ್ ಗಣೇಶ್ ವೃತ್ತಿ ಜೀವನದಲ್ಲಿ ಒಂದು ಸಂಕಷ್ಟದ ದಿನ ಎದುರಿಸಿದ್ದಾರೆ. ಆಗಸ್ಟ್ 27, 2018 ರಂದು ಅವರ ತಂದೆ ರಾಮಕೃಷ್ಣ (84) ಕಾಲವಾದಾಗ ಒಂದು ಸಂದಿಗ್ಧ ಪರಿಸ್ಥಿತಿ ಗಣೇಶ್ ಅವರಿಗೆ ಎದುರಾಗಿತ್ತು. ಅಂದು ಸಾವಿನ ಸುದ್ದಿ ಗಣೇಶ್ಗೆ ತಲುಪಿದಾಗ ಅವರು ಗಿಮಿಕ್ ಚಿತ್ರದ ಸೆಟ್ಲ್ಲಿದ್ದರು. ಅಂದು ಎಲ್ಲ ಕಲಾವಿದರು ಒಂದು ದೀರ್ಘವಾದ ಹಾಸ್ಯಮಯ ಸನ್ನಿವೇಶ ಚಿತ್ರೀಕರಣಕ್ಕೆ ಅಣಿಯಾಗಿದ್ದರು. ಗಣೇಶ್ ಅವರ ತಂದೆ ಸಾವನ್ನಪ್ಪಿರುವುದನ್ನು ನಿರ್ದೇಶಕ ನಾಗಣ್ಣ ಅವರಿಗೆ ತಿಳಿಸಿರಲಿಲ್ಲ. ಅಲ್ಲಿ ಇದ್ದವರಲ್ಲಿ ನಿರ್ಮಾಪಕ ದೀಪಕ್ ಸ್ವಾಮಿ ಹಾಗೂ ನಟ ರವಿಶಂಕರ್ ಗೌಡ ಅವರಿಗೆ ಮಾತ್ರ ಈ ವಿಚಾರ ಗೊತ್ತಿತ್ತು.
ಅದು ಗಣೇಶ್ ಪ್ರೀತಿಸಿದ (ಮೋನಿಕಾ ಸಿಂಗ್) ಹುಡುಗಿಯ ಹೆಣ್ಣು ಕೇಳಲು ಹೋಗುವ ಹಾಸ್ಯ ಸನ್ನಿವೇಶ. ಹೆಣ್ಣಿನ ತಂದೆ ಶೋಭರಾಜ್ ಪಟಪಟನೆ ಪ್ರಶ್ನೆ ಕೇಳುವುದಕ್ಕೆ ಗಣೇಶ್ ಉತ್ತರ ನೀಡಬೇಕಾಗಿತ್ತು. ಅದು ಪ್ರೇಕ್ಷಕರಿಗೆ ಖುಷಿ ಕೊಡುವ ಸನ್ನಿವೇಶ ಅಂತ ಗಣೇಶ್ ಅವರಿಗೆ ಗೊತ್ತಿತ್ತು. ಆದರೆ, ಅದನ್ನು ಅವರು ಬಹಳ ಭಾರವಾದ ಮನಸ್ಸಿನಿಂದ ಮಾಡಬೇಕಾಯಿತು. ಅಪ್ಪನ ಸಾವಿನ ದುಃಖದ ನಡುವೆಯೂ 5 ರಿಂದ 10 ಪೇಜ್ ಸಂಭಾಷಣೆ ಒಪ್ಪಿಸುತ್ತಿದ್ದ ಗಣೇಶ್ ಅವರಿಗೆ ಕೆಲವು ಸಾಲುಗಳನ್ನು ಹೇಳಲು ಕಷ್ಟವಾಗಿತ್ತು.