ತಮ್ಮ ಮ್ಯಾನರಿಸಂ, ಡೈಲಾಗ್ನಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ನಟ ಕರಾಟೆ ಕಿಂಗ್ ಶಂಕರ್ ನಾಗ್ ಅಗಲಿ ಇಂದಿಗೆ 31 ವರ್ಷ. ಆಟೋರಾಜ ಎಂದು ಕೂಡಾ ಹೆಸರಾಗಿದ್ದ ಶಂಕರ್ನಾಗ್ ಅವರ ಫೋಟೋಗಳನ್ನು ಇಂದಿಗೂ ಕೂಡಾ ಬಹಳ ಆಟೋಗಳ ಮೇಲೆ ಕಾಣಬಹುದು.
ಓದು ಮುಗಿಸಿ ವಿದೇಶಕ್ಕೆ ಹೋಗಬೇಕು ಎಂದುಕೊಂಡಿದ್ದ ಶಂಕರ್ ನಾಗ್ ಅಣ್ಣನ ಬಲವಂತದಿಂದ ರಂಗಭೂಮಿ ಪ್ರವೇಶಿಸಿದರು. ನಂತರ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಅವರು ಬೇಡ ಎಂದುಕೊಂಡು ಬಂದ ಕ್ಷೇತ್ರವನ್ನು ಪ್ರೀತಿಯಿಂದ ಅಪ್ಪಿಕೊಂಡರು.
ಒಮ್ಮೆ ಅನಂತ್ನಾಗ್ ಅವರು ತಮ್ಮನ ಕಾಲೆಳೆಯುವ ಉದ್ದೇಶದಿಂದ 'ಶಂಕರ ವಿದೇಶಕ್ಕೆ ಹೋಗಬೇಕೆಂದುಕೊಂಡೆ, ಯಾವಾಗಪ್ಪಾ ಹೋಗೋದು' ಎಂದು ಕೇಳಿದ್ದರಂತೆ. ಅದಕ್ಕೆ ಉತ್ತರಿಸಿದ್ದ ಶಂಕರ್ ನಾಗ್ 'ಇನ್ನೆಲ್ಲಿಯ ವಿದೇಶ ಅಣ್ಣ' ಎಂದರಂತೆ. ಏಕೆಂದರೆ ಅಷ್ಟರಲ್ಲಿ ಅವರು ಚಿತ್ರರಂಗದಲ್ಲಿ ಅಷ್ಟು ಬ್ಯುಸಿ ಆಗಿದ್ದರು. ಕಾರ್ಯಕ್ರಮವೊಂದರಲ್ಲಿ ಅನಂತ್ ನಾಗ್ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದರು.
ವರನಟ ಡಾ.ರಾಜ್ಕುಮಾರ್ ಅವರೊಂದಿಗೆ ಶಂಕರ್ ನಾಗ್ 1978ರಲ್ಲಿ ಗಿರೀಶ್ ಕಾರ್ನಾಡ್ ಅವರ 'ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ಕರಿಯರ್ ಆರಂಭಿಸಿದ ಶಂಕರ್ ನಾಗ್ ನಂತರ ಹಿಂತಿರುಗಿ ನೋಡಲೇ ಇಲ್ಲ. 'ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶನ ಕೂಡಾ ಆರಂಭಿಸಿದ ಅವರು ಅಲ್ಲಿಂದ ಮಿಂಚಿನ ವೇಗದಲ್ಲೇ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ತಾವು ನಿರ್ದೇಶಿಸಿದ ಮೊದಲ ಚಿತ್ರಕ್ಕೆ 7 ರಾಜ್ಯ ಪ್ರಶಸ್ತಿಗಳನ್ನು ಕೂಡ ಪಡೆದರು.
'ಎಸ್ಪಿ ಸಾಂಗ್ಲಿಯಾನ' ಚಿತ್ರವನ್ನಂತೂ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಶಂಕರ್ ಖಾಕಿ ಧರಿಸಿದಾಗ ಅವರಿಗೆ ಎಲ್ಲರ ದೃಷ್ಟಿ ತಾಕುತ್ತಿತ್ತು. ಏಕೆಂದರೆ ಅವರಿಗೆ ಆ ಬಟ್ಟೆ ಅಷ್ಟು ಚೆನ್ನಾಗಿ ಒಪ್ಪುತ್ತಿತ್ತು ಎಂದು ಅವರ ಬಹಳಷ್ಟು ಆತ್ಮೀಯರು ಹೇಳಿದ್ದಾರೆ.
'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನಿರ್ದೇಶಿಸಿ ಶಂಕರ್ ನಾಗ್ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದರು. ಇದು ಹಿಂದಿ ಭಾಷೆಯಲ್ಲಿ ತಯಾರಾದರೂ ಇದರಲ್ಲಿ ನಟಿಸಿದ್ದು, ಕನ್ನಡ ಕಲಾವಿದರು. ಅನಂತ್ ನಾಗ್, ಡಾ. ವಿಷ್ಣುವರ್ಧನ್, ಗಿರೀಶ್ ಕಾರ್ನಾಡ್, ಗಾಯತ್ರಿ, ಮಾಸ್ಟರ್ ಮಂಜುನಾಥ್ ಹಾಗೂ ಇನ್ನಿತರರು ನಟಿಸಿದ್ದರು. ಶಿವಮೊಗ್ಗದಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗಿತ್ತು.
ಡಾ. ವಿಷ್ಣುವರ್ಧನ್ ಜೊತೆ ಶಂಕರ್ ನಾಗ್ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದ್ದ ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣ 35ನೇ ವಯಸ್ಸಿಗೆ ಈ ಲೋಕಕ್ಕೆ ವಿದಾಯ ಹೇಳಿದರು. 30 ಸೆಪ್ಟೆಂಬರ್ 1990ರಂದು ಚಿತ್ರೀಕರಣ ಮುಗಿಸಿ ಬರುವಾಗ ದಾವಣಗೆರೆ ಬಳಿ ಅವರ ಕಾರು ಅಪಘಾತಕ್ಕೀಡಾಗಿ ನಿಧನರಾದರು. ಕರಾಟೆ ಕಿಂಗ್ ಶಂಕರ್ನಾಗ್ ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪು ಮಾತ್ರ ಎಂದಿಗೂ ಹಸಿರಾಗಿರುತ್ತದೆ. ಒಂದು ವೇಳೆ ಶಂಕರ್ ನಾಗ್ ಇಂದಿಗೂ ಬದುಕಿದ್ದರೆ ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಹೆಸರು ಮಾಡುತ್ತಿತ್ತು ಎಂಬುದು ಮಾತ್ರ ನಿಜ.
ಇದನ್ನೂ ಓದಿ:ಬಿಗ್ಬಾಸ್ ಮನೆಗೆ ಸುಶಾಂತ್ ಗರ್ಲ್ಫ್ರೆಂಡ್ ರಿಯಾ: ಪ್ರತಿ ವಾರಕ್ಕೆ 35 ಲಕ್ಷ ರೂ. ಸಂಭಾವನೆ?