ಬೆಂಗಳೂರು:ಶುಗರ್ ಫ್ಯಾಕ್ಟರಿ, ಲವ್ ಮಾಕ್ಟೈಲ್-2 ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಡಾರ್ಲಿಂಗ್ ಕೃಷ್ಣರ ಇನ್ನೊಂದು ಸಿನಿಮಾ 'ದಿಲ್ ಪಸಂದ್' ಫಸ್ಟ್ಲುಕ್ ಇಂದು ಬಿಡುಗಡೆಯಾಗಿದೆ. ಇದರಲ್ಲಿ ನಾಯಕಿ ನಟಿ ನಿಶ್ವಿಕಾ ನಾಯ್ಡು ಜೊತೆ ರೊಮ್ಯಾಂಟಿಕ್ ಆಗಿ ಕೃಷ್ಣ ಕಾಣಿಸಿಕೊಂಡಿದ್ದಾರೆ.
ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಡಾರ್ಲಿಂಗ್ ಕೃಷ್ಣ. ಇದರ ಜೊತೆಗೆ ಡಾರ್ಲಿಂಗ್ ಕೃಷ್ಣ ದಿಲ್ ಪಸಂದ್ ಎಂಬ ಹೊಸ ಸಿನಿಮಾ ಮಾಡ್ತಾ ಇರೋದು ಗೊತ್ತಿರುವ ವಿಚಾರ. ಕೆಲವು ತಿಂಗಳ ಹಿಂದೆ ಈ ಚಿತ್ರದ ದಿಲ್ ಪಸಂದ್ ಸಿನಿಮಾದ ಟೈಟಲ್ ಅನಾವರಣ ಮಾಡಲಾಗಿತ್ತು. ಇದೀಗ ಸಿನಿಮಾದ ಫಸ್ಟ್ಲುಕ್ ಕೂಡ ಬಿಡುಗಡೆಯಾಗಿದ್ದು, ಕೃಷ್ಣ ಮತ್ತು ನಿಶ್ವಿಕಾರ ಜೋಡಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ಫೋಟೋದಲ್ಲಿ ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಶಿವ ತೇಜಸ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಟ್ರಯಾಂಗಲ್ ಲವ್ ಸ್ಟೋರಿ ಸಿನಿಮಾ. ಈ ಚಿತ್ರದಲ್ಲಿ ಕೃಷ್ಣನಿಗೆ ನಿಶ್ವಿಕಾ ನಾಯ್ಡು ಅಲ್ಲದೇ, ಮತ್ತೊಬ್ಬ ನಟಿ ಮೇಘಾ ಶೆಟ್ಟಿ ಕೂಡ ಜೋಡಿಯಾಗಿರಲಿದ್ದಾರೆ.
ಹಾಗೆಯೇ ಚಿತ್ರದಲ್ಲಿ ತಬಲನಾಣಿ, ಸಾಧು ಕೋಕಿಲ, ರಂಗಾಯಣ ರಘು, ಅರುಣ್ ಬಾಲರಾಜ್ ಮುಂತಾದವರು ನಟಿಸಿದ್ದಾರೆ. ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅರ್ಜುನ್ ಜನ್ಯರ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನ ದಿಲ್ ಪಸಂದ್ ಚಿತ್ರಕ್ಕಿದೆ.
ಈಗಾಗಲೇ ಬೆಂಗಳೂರಿನಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ದ್ವಿತೀಯ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ.